ಹಾಸನ: ಶಕ್ತಿ ದೇವತೆ ಹಾಸನಾಂಬ ಜಾತ್ರೆಗೆ ಸಿದ್ಧತೆ: ಭಕ್ತರ ನಿರೀಕ್ಷೆ ಅಪಾರ

The countdown has begun for the historic Hasanamba Devi Jatra Mahotsav, which is celebrated only once a year by devotees. Like every year, preparations are in full swing to celebrate the Jatra Mahotsav on a grand scale this year too.

ಹಾಸನ: ವರ್ಷಕ್ಕೊಮ್ಮೆಯಷ್ಟೇ ಭಕ್ತರಿಗೆ ದರ್ಶನ ಭಾಗ್ಯ ಕರುಣಿಸುವ ಇತಿಹಾಸ ಪ್ರಸಿದ್ಧ ಹಾಸನಾಂಬ ದೇವಿಯ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಪ್ರತಿವರ್ಷದಂತೆ ಈ ವರ್ಷವೂ ಜಾತ್ರೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಸಿದ್ಧತೆಗಳು ಭರದಿಂದ ಸಾಗಿವೆ.

ಮೈಸೂರು ದಸರಾದಂತೆಯೇ ಪ್ರಮುಖ ರಸ್ತೆಗಳು ಸೇರಿದಂತೆ ನಗರದ ತುಂಬೆಲ್ಲ ಬಣ್ಣ ಬಣ್ಣದ ವಿದ್ಯುತ್ ದೀಪ ಅಳವಡಿಸುವ ಕಾರ್ಯ ನಡೆಯುತ್ತಿದೆ. ನಗರದ ಪ್ರವೇಶ ಮಾರ್ಗಗಳಲ್ಲಿ ಎಲ್ಲ ಕಡೆ ಭಕ್ತರು ಹಾಗೂ ಗಣ್ಯರನ್ನು ಸ್ವಾಗತಿಸುವ ಸ್ವಾಗತ ಕಮಾನು ಅಳವಡಿಸಲಾಗುತ್ತಿದೆ. ಹಾಸನಾಂಬೆಯ ದರ್ಶನ ಹಾಗೂ ಪೂಜಾಕಾರ್ಯ ಕಣ್ತುಂಬಿಕೊಳ್ಳಲು ಅನುಕೂಲವಾಗುವಂತೆ ಪ್ರಮುಖ ವೃತ್ತಗಳಲ್ಲಿ ಎಲ್‌ಇಡಿ ಅಳವಡಿಕೆ ಮಾಡಲಾಗುತ್ತಿದೆ. ನಗರದಾದ್ಯಂತ ಗುಂಡಿ ಬಿದ್ದಿದ್ದ ರಸ್ತೆಗಳಿಗೆ ಡಾಂಬರೀಕಣ ಮಾಡಿದೆ.

ಈ ಬಾರಿ ದೇವಿ ದರ್ಶನದ ಜೊತೆಗೆ ಟೂರ್ ಪ್ಯಾಕೇಜ್, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಈ ಬಾರಿ ಯಾವುದೇ ಗೊಂದಲ ಆಗದಂತೆ ಅಚ್ಚುಕಟ್ಟಾಗಿ ಆಚರಿಸಲು ಬೇಕಾದ ಎಲ್ಲ ಸಿದ್ಧತೆ ಮಾಡಿ ಕೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ.

ಅದರಂತೆ ಆಯೋಜನೆ ಮಾಡಿ, ಯಶಸ್ವಿಗೊಳಿಸುವ ಸಂಬಂಧ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರು ಹಲವು ಸುತ್ತಿನ ಸಭೆ ನಡೆಸಿ ಅಗತ್ಯ ಪೂರ್ವ ತಯಾರಿ ಮಾಡಿಕೊಳ್ಳುವಂತೆ ಅಧೀನ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

ದೇವಸ್ಥಾನದ ಒಳ-ಹೊರಗೆ ಬಣ್ಣ ಬಳಿಯುವ ಕಾರ್ಯ ಮುಗಿದಿದ್ದು, ಮಾಡಿಕೊಳ್ಳಲಾಗುತ್ತಿದೆ. ದೇವಾಲಯದ ಒಳ ಮತ್ತು ಹೊರಗೆ ಆಕರ್ಷಕ ರೀತಿಯಲ್ಲಿ ಹೂವಿನ ಅಲಂಕಾರ ಮಾಡುವ ಕಾರ್ಯ ಶುರುವಾಗಿದೆ. ಆಹ್ವಾನ ಪತ್ರಿಕೆಗಳ ಹಂಚಿಕೆ ಕಾರ್ಯ ಸಹ ನಡೆಯುತ್ತಿದೆ. ಈಗಾಗಲೇ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ಗಣ್ಯರಿಗೆ ಜಿಲ್ಲಾಡಳಿತ ದಿಂದ ಆಮಂತ್ರಣ ನೀಡಿ ಆಹ್ವಾನಿಸಲಾಗಿದೆ.

ಕಳೆದ ಬಾರಿ 20 ಲಕ್ಷಕ್ಕೂ ಹೆಚ್ಚು ಭಕ್ತರು ದೇವಿಯ ದರ್ಶನ ಪಡೆದಿದ್ದರು. ಈ ಬಾರಿ ಇನ್ನೂ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಅವರ ನಿಯಂತ್ರಣಕ್ಕೆ ಬೇಕಾದ ಭದ್ರತೆ,1೦೦ಕ್ಕೂ ಹೆಚ್ಚು ಸಂಚಾರಿ ಶೌಚಾಲಯಗಳ ಅಳವಡಿಕೆ, ಕುಡಿಯುವ ನೀರು ಇತ್ಯಾದಿ ಮೂಲಭೂತ ಸೌಕರ್ಯ, ಪ್ರಸಾದ ವಿತರಣೆ ಹೀಗೆ ಎಲ್ಲ ರೀತಿಯ ಮುನ್ನೆಚ್ಚರಿಕೆ ಜೊತೆಗೆ ನೂಕು ನುಗ್ಗಲು ತಡೆಯಲು, ಜಿಲ್ಲಾಡಳಿತ, ಪೊಲೀಸ್ ಇಲಾಖೆ ಅಗತ್ಯ ಕ್ರಮ ವಹಿಸಿದೆ.

ಸರಗಳ್ಳತನ, ಪರ್ಸ್ ಕಳವು ಮತ್ತಿತರ ಅಪರಾಧ ಜೊತೆಗೆ ಬೇರೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಹದ್ದಿನ ಕಣ್ಣಿಡಲು 1೦೦ಕ್ಕೂ ಹೆಚ್ಚು ಸಿಸಿಟಿವಿ ಅಳವಡಿಸಲಾಗುತ್ತಿದೆ. ವಯೋವೃದ್ಧರು ಮತ್ತು ಅಂಗವಿಕಲರನ್ನು ದೇವರ ದರ್ಶನಕ್ಕೆ ಕರೆದುಕೊಂಡು ಹೋಗಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ.

ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಲ್ಲುವ ಭಕ್ತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಫ್ಯಾನ್, ಗರ್ಭಗುಡಿ ಮುಂಭಾಗ ಎಸಿ ಅಳವಡಿಸಲಾಗಿದೆ. ಸುಗಮ ದರ್ಶನ ಹಾಗೂ ಜನದಟ್ಟಣೆ ಉಂಟಾಗುವುದನ್ನು ತಪ್ಪಿಸಲು ಸಾಲಾಗಿ ಸಾಗಲು ಬ್ಯಾರಿಕೇಡ್ ವ್ಯವಸ್ಥೆ, ಬಿಸಿಲು-ಮಳೆಯಿಂದ ರಕ್ಷಣೆ ನೀಡಲು ಜರ್ಮನ್ ಟೆಂಟ್ ನಿರ್ಮಾಣ, ನೆಲಕ್ಕೆ ಮ್ಯಾಟ್ ಅಳವಡಿಕೆ ಕಾರ್ಯ ಚುರುಕಿನಿಂದ ನಡೆಯುತ್ತಿದೆ. ಭಕ್ತರಿಗೆ ಮಜ್ಜಿಗೆ ವ್ಯವಸ್ಥೆ ಮಾಡಲಾಗುತ್ತಿದೆ.