ಚಿಕ್ಕಮಗಳೂರು: ಕುಖ್ಯಾತ ‘ಚಡ್ಡಿ ಗ್ಯಾಂಗ್’ ನ ಇಬ್ಬರು ಸದಸ್ಯರ ಬಂಧನ — ₹32 ಲಕ್ಷ ಮೌಲ್ಯದ ವಸ್ತುಗಳ ಸಮೇತ ಅರೆಸ್ಟ್

The city police have arrested two members of the notorious Chaddi gang in a successful operation. They have seized items worth around ₹32 lakh from the arrested persons.

ಚಿಕ್ಕಮಗಳೂರು : ನಗರ ಪೊಲೀಸರು ಯಶಸ್ವಿ ಕಾರ್ಯಾಚರಣೆಯಲ್ಲಿ ಕುಖ್ಯಾತ ಚಡ್ಡಿ ಗ್ಯಾಂಗ್ ನ ಇಬ್ಬರು ಸದಸ್ಯರನ್ನು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು ₹32 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ಮಹಾರಾಷ್ಟ್ರ ಮೂಲದ ಪಪ್ಪು ಟಿಪ್ಪು ಪವಾರ್ ಮತ್ತು ಮಂಗೇಶ್ ಅಂಕುಶ್ ಶಿಂಧೆ ಎಂದು ಗುರುತಿಸಲಾಗಿದೆ.

ಈ ಗ್ಯಾಂಗ್ ಚಿಕ್ಕಮಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಳ್ಳತನಗಳನ್ನು ನಡೆಸಿದ್ದು, ಒಟ್ಟು 17 ಕಳ್ಳತನ ಪ್ರಕರಣಗಳನ್ನು ಭೇದಿಸಿದ ಪೊಲೀಸರು ದೊಡ್ಡ ಸಾಧನೆ ಮಾಡಿದ್ದಾರೆ.

ಬಂಧಿತರಿಂದ 495 ಗ್ರಾಂ ಚಿನ್ನ, 1010 ಗ್ರಾಂ ಬೆಳ್ಳಿ ಹಾಗೂ ₹75,000 ನಗದು ವಶಪಡಿಸಿಕೊಂಡಿದ್ದಾರೆ.

ಚಿಕ್ಕಮಗಳೂರು ನಗರ ಪೊಲೀಸ್ ಕ್ವಾರ್ಟರ್ಸ್ ಕಳ್ಳತನ ಪ್ರಕರಣದ ತನಿಖೆ ವೇಳೆ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಕ್ರಂ ಅಮಟೂರ ಅವರು ವಿಶೇಷ ತಂಡ ರಚಿಸಿದ್ದರು. ಎಎಸ್ಪಿ ಜಯಕುಮಾರ್, ಡಿವೈಎಸ್ಪಿ ಶೈಲೇಂದ್ರ ಹಾಗೂ ನಗರ ಠಾಣಾ ಪಿಐ ಅಭಯ್ ಪ್ರಕಾಶ್ ಅವರ ನೇತೃತ್ವದಲ್ಲಿ ನಡೆದ ತಂತ್ರಬದ್ಧ ಕಾರ್ಯಾಚರಣೆಯ ಫಲವಾಗಿ ಬಂಧನ ಸಾಧ್ಯವಾಯಿತು.

ಪೊಲೀಸರು ಕಳೆದ ಎರಡು-ಮೂರು ತಿಂಗಳ ಕಾಲ 400ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿ ಪತ್ತೆ ಹಚ್ಚಿದ್ದಾರೆ.

ಬಂಧಿತರು ಚಿಕ್ಕಮಗಳೂರು, ಚಿತ್ರದುರ್ಗ, ಬಳ್ಳಾರಿ ಮತ್ತು ಗದಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.