ಹಾಸನ: ಕೇಂದ್ರ ಸರ್ಕಾರ ಶ್ರಮ ಧರ್ಮ ಎಂದು ಹೇಳಿಕೊಂಡು ಶ್ರಮ ಶಕ್ತಿ ನೀತಿ-2025 ಎಂಬ ರಾಷ್ಟ್ರೀಯ ಕಾರ್ಮಿಕ ಮತ್ತು ಉದ್ಯೋಗ ನೀತಿಯ ಕರಡು ನೀತಿಯನ್ನು ಪ್ರಕಟಿಸಿದ್ದು, ಇದು ಗುಲಾಮಗಿರಿ ಹೇರಿಕೆ ಎಂದು ಸಿಐಟಿಯು ರಾಜ್ಯ ಉಪಾಧ್ಯಕ್ಷ ಧರ್ಮೇಶ್ ಖಂಡಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ, ಕಾರ್ಮಿಕ ಕಾನೂನು, ಆಡಳಿತ ನಿಯಂತ್ರಣವನ್ನು ಮುಕ್ತಗೊಳಿಸಿ ದುಡಿಯುವ ಜನರ ಹಕ್ಕು ದಮನ ಮಾಡುವುದು ಇದರ ಉದ್ದೇಶ ಎಂದರು.
ಇದರಲ್ಲಿ ಮನುಸ್ಮೃತಿ, ಧರ್ಮಶಾಸ್ತ್ರಗಳನ್ನು ಪ್ರಸ್ತಾಪಿಸಲಾಗಿದೆ. ಮತ್ತೊಮ್ಮೆ ಅಸಮಾನತೆಯನ್ನು ಕಾನೂನು ಬದ್ಧಗೊಳಿಸುವ ಮತ್ತು ಕಾರ್ಮಿಕರ ಹಕ್ಕು ಆಧಾರಿತ ವಿಧಾನವನ್ನು ನಿಗ್ರಹಿಸುವ ಕಸರತ್ತು ಇದಾಗಿದೆ ಎಂದು ದೂರಿದರು.
ಭಾರತೀಯ ಸಂವಿಧಾನದ ಮೂಲಭೂತ ಮೌಲ್ಯಗಳಿಗೆ ವ್ಯತಿರಿಕ್ತವಾಗಿರುವ ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಲಾಗುತ್ತಿದೆ.
ಕಾರ್ಮಿಕ ಇಲಾಖೆ ತನ್ನೆಲ್ಲ ಅಧಿಕಾರ-ಬಲವನ್ನು ಕಳೆದುಕೊಳ್ಳಲಿದೆ. ಕೇಂದ್ರದ ಈ ಕರಡು ನೀತಿಯನ್ನು ಖಂಡಿಸಿ ನ.26 ರ ಸಂವಿಧಾನ ದಿನದಂದು ಪ್ರತಿಭಟನೆ ನಡೆಸಲಾಗುವುದು ಎಂದರು.
ಇದಕ್ಕೂ ಮುನ್ನ ನಗರದಲ್ಲಿ ನ.13 ರಿಂದ 3 ದಿನಗಳ ಕಾಲ ನಡೆದ ಸಿಐಟಿಯು 16ನೇ ರಾಜ್ಯ ಸಮ್ಮೇಳನ ಯಶಸ್ವಿಯಾಗಿದ್ದು, ಇದಕ್ಕಾಗಿ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ಹೇಳಿದರು.
ನಾಡಿನ ಸಾಮಾಜಿಕ,ಆರ್ಥಿಕ, ರಾಜಕೀಯ ಪರಿಸ್ಥಿತಿ, ದುಡಿಯುವ ಜನರ ಮುಂದಿನ ಸವಾಲುಗಳ ಬಗ್ಗೆ ಚರ್ಚೆ ನಡೆಯಿತು. ಜೊತೆಗೆ ಕಾರ್ಮಿಕರಿಗೆ ಮಾಸಿಕ 36 ಸಾವಿರ ಕನಿಷ್ಠ ವೇತನ, 10 ಸಾವಿರ ಪಿಂಚಿಣಿ, ಆರೋಗ್ಯ, ಸೇವಾ ಭದ್ರತೆ, ಗುತ್ತಿಗೆ, ಹೊರಗುತ್ತಿಗೆ, ದಿನಗೂಲಿ ನೌಕರರ ಕಾಯಂ ಸೇರಿದಂತೆ ಹಲವು ನಿರ್ಣಯ ಕೈಗೊಳ್ಳಲಾಯಿತು ಎಂದರು.
ಸಮ್ಮೇಳನದಲ್ಲಿ ನೂತನ ರಾಜ್ಯ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ಎಂ.ಎಸ್.ಮೀನಾಕ್ಷಿ ಸುಂದರಂ, ಪ್ರಧಾನ ಕಾರ್ಯದರ್ಶಿಯಾಗಿ ಎಸ್.ವರಲಕ್ಷ್ಮಿ, ರಾಜ್ಯ ಉಪಾಧ್ಯಕ್ಷರಾಗಿ ಧರ್ಮೇಶ್ ಮೊದಲಾದವರನ್ನು ಆಯ್ಕೆ ಮಾಡಲಾಗಿದೆ ಎಂದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ.ಪುಷ್ಪ ಮಾತನಾಡಿ, ಗ್ರಾಪಂ ನೌಕರರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನ.29 ರಂದು ಮೈಸೂರಿನ ಸಿಎಂ ಮನೆ ಮುಂದೆ ಚಲೋ ಹಾಗೂ ಅಂಗನವಾಡಿ ನೌಕರರಿಗೆ ಮಾರಕವಾಗಿರುವ ಎಫ್‌ಆರ್‌ಎಸ್ ಕೈ ಬಿಡುವಂತೆ ಆಗ್ರಹಿಸಿ ಹಾಗೂ ಬಾಕಿ ವೇತನ ನೀಡಿಕೆಗೆ ಆಗ್ರಹಿಸಿ ಡಿ.1 ರಿಂದ ಕೇಂದ್ರ ಸಚಿವರ ಮನೆ ಮುಂದೆ ಅನಿರ್ದಿಷ್ಟ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಖಜಾಂಚಿ ಅರವಿಂದ್, ಮಂಜುಳಾ, ಸೌಮ್ಯ, ಹೊನ್ನೇಗೌಡ ಇದ್ದರು.










