ಹಾಸನ: ವಿಜಾಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಅಸಂವಿಧಾನಿಕ ಹಾಗೂ ಮಹಿಳಾ, ದಲಿತ ವಿರೋಧಿ ಹೇಳಿಕೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಭೀಮ್ ಆರ್ಮಿ ಸಂಘಟನೆಯವರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟ ಪ್ರತಿಭಟನಾಕಾರರು, ಡಿಸಿ ಕಚೇರಿ ಆವರಣಕ್ಕೆ ಆಗಮಿಸಿ ಯತ್ನಾಳ್ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಮಾತನಾಡಿದ ಸಂಘಟನೆಯ ಚನ್ನರಾಯಪಟ್ಟಣ ತಾಲ್ಲೂಕು ಅಧ್ಯಕ್ಷ ಹೆಚ್.ಎಸ್. ಮಂಜುನಾಥ್, ದಸರಾ ಉದ್ಘಾಟನೆಯನ್ನು ಮುಸ್ಲಿಂ, ದಲಿತ ಮಹಿಳೆಯರು ಮಾಡುವ ಅರ್ಹತೆ ಇಲ್ಲ, ಕೇವಲ ಸನಾತನ ಧರ್ಮದ ಮಹಿಳೆಯರಷ್ಟೇ ಅರ್ಹರು ಎಂದಿದ್ದಾರೆ.
ಈ ಹೇಳಿಕೆ ಮುಸ್ಲಿಂ ಹಾಗೂ ದಲಿತ ಮಹಿಳೆಯರ ಗೌರವಕ್ಕೆ ಧಕ್ಕೆ ತಂದಿದೆ ಹಾಗೂ ಜಾತಿ ಮತ್ತು ಧಾರ್ಮಿಕ ಬೇಧ ಭಾವ ಪ್ರೋತ್ಸಾಹಿಸುತ್ತದೆ. ಇದು ಸಂವಿಧಾನದ ಜಾತ್ಯಾತೀತ ಮತ್ತು ಸಮಾನತೆಯ ತತ್ವಗಳಿಗೆ ವಿರುದ್ಧವಾಗಿದೆ ಎಂದು ದೂರಿದರು.
ಎಸ್ಪಿ ಅವರು, ಕೂಡಲೇ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಮತ್ತು ಮಹಿಳೆಯರ ಗೌರವಕ್ಕೆ ಕುಂದು ತರುವ ಕಾನೂನಿನ ಅಡಿ ಯತ್ನಾಳ್ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಭೀಮ್ ಆರ್ಮಿ ಸಂಘಟನೆ ಜಿಲ್ಲಾಧ್ಯಕ್ಷ ಪ್ರಸನ್ನ, ಕಾರ್ಯಾಧ್ಯಕ್ಷ ದೊರೆರಾಜು, ಪ್ರಧಾನ ಕಾರ್ಯದರ್ಶಿ ವೆಂಕಟೇಶ್, ಚೇತನ್, ಸ್ವಾಮಿ ಜಾಜೂರು, ವಾಸು, ಜಿಲ್ಲಾ ಜಾಗೃತಿ ಸಮಿತಿ ಸದಸ್ಯೆ ಶಿವಮ್ಮ, ಭಾಗ್ಯ ಕಲಿವೀರ್, ಜೈಭೀಮ್ ಬ್ರಿಗೇಡ್ ಜಿಲ್ಲಾಧ್ಯಕ್ಷ ರಾಜೇಶ್, ಮುಬಷೀರ್ ಅಹಮದ್, ಶಜೇಲ್ ಅಹಮದ್ ಇದ್ದರು.










