ಬೆಂಗಳೂರು: ಆತ ಹಳ್ಳಿ ರೈತನ ಮಗ, ನಾಟಕ ಗೊತ್ತಿಲ್ಲ – ಗಿಲ್ಲಿ ಬಗ್ಗೆ ಮನಬಿಚ್ಚಿ ಮಾತನಾಡಿದ ಯಶಸ್ವಿನಿ

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್‌ 12ರಲ್ಲಿ (Bigg Boss Kannada 12) ಈ ಬಾರಿ ಹೆಚ್ಚು ಗಮನ ಸೆಳೆಯುತ್ತಿರುವ ಸ್ಪರ್ಧಿ ಎಂದರೆ ಅದು ಗಿಲ್ಲಿ.

ಮನೆ ಒಳಗಿನ ಅವನ ಸರಳ ಆಟ, ನೇರ ನಡವಳಿಕೆ ಹಾಗೂ ಮುಗ್ದತನಕ್ಕೆ ಪ್ರೇಕ್ಷಕರು ಮನಸೋತಿದ್ದಾರೆ. ಫಿನಾಲೆಗೂ ಮುಂಚೆಯೇ “ಈ ಬಾರಿ ಕಪ್‌ ಗಿಲ್ಲಿಗೇ” ಎನ್ನುವ ಮಾತುಗಳು ಸೋಷಿಯಲ್‌ ಮೀಡಿಯಾದಲ್ಲಿ ಜೋರಾಗಿ ಕೇಳಿಬರುತ್ತಿವೆ.

ಗಿಲ್ಲಿಯ ಆಟಕ್ಕೆ ಕೇವಲ ವೀಕ್ಷಕರಷ್ಟೇ ಅಲ್ಲ, ಶೋಬಿಸ್ನ ಹಲವಾರು ಕಲಾವಿದರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಆ ಪಟ್ಟಿಗೆ ಸೇರಿರುವವರು ಕಲರ್ಸ್‌ ಕನ್ನಡದ ಜನಪ್ರಿಯ ಧಾರಾವಾಹಿ ಮಂಗಳ ಗೌರಿ ಮದುವೆಯಲ್ಲಿ ಸ್ನೇಹಾ ಪಾತ್ರದ ಮೂಲಕ ಮನೆಮಾತಾಗಿದ್ದ ನಟಿ ಯಶಸ್ವಿನಿ ಕೆ ಸ್ವಾಮಿ.

ಸ್ಟಾರ್‌ ಸುವರ್ಣ ವಾಹಿನಿಯ ಅನುರೂಪ ಧಾರಾವಾಹಿಯ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ಯಶಸ್ವಿನಿ, ರಾಜಾ ರಾಣಿ ಧಾರಾವಾಹಿಯಲ್ಲೂ ಗಮನ ಸೆಳೆದಿದ್ದರು. ಬಿಗ್‌ ಬಾಸ್‌ ಮಿನಿ ಸೀಸನ್‌, ಭರ್ಜರಿ ಬ್ಯಾಚುಲರ್ಸ್ ಸೇರಿದಂತೆ ಹಲವು ರಿಯಾಲಿಟಿ ಶೋಗಳಲ್ಲಿ ಭಾಗಿಯಾಗಿ ತಮ್ಮದೇ ಛಾಪು ಮೂಡಿಸಿದವರು. ಇದೀಗ ಸಂದರ್ಶನವೊಂದರಲ್ಲಿ ಗಿಲ್ಲಿಯ ಬಗ್ಗೆ ಅವರು ಮನಬಿಚ್ಚಿ ಮಾತನಾಡಿದ್ದಾರೆ.

ಮಾಧ್ಯಮದ ಸಂದರ್ಶನದಲ್ಲಿ ನಟಿ ಹೇಳುವಂತೆ, “ಗಿಲ್ಲಿ ಬಿಗ್‌ ಬಾಸ್‌ ಮನೆಯಲ್ಲಿ ಹೇಗಿದ್ದಾನೋ, ಹೊರಗಡೆಯೂ ಅವನು ಹಾಗೇ. ಹಳ್ಳಿ ಹಿನ್ನೆಲೆಯಿಂದ ಬಂದ ರೈತನ ಮಗ ಅವನು. ತುಂಬಾ ಮುಗ್ದ. ಎಲ್ಲಿ ಏನು ಮಾತಾಡಬೇಕು ಅನ್ನೋದು ಕೆಲವೊಮ್ಮೆ ಅವನಿಗೆ ಗೊತ್ತಾಗಲ್ಲ. ಕೆಲ ಸಮಯದಲ್ಲಿ ಅವನ ಮಾತುಗಳು ನನಗೂ ಇರಿಟೇಟ್‌ ಆಗಿದ್ದವು. ಬೈಯಿಸ್ಕೊಳ್ಳೋನು. ಆದರೆ ಅವನು ಮಾಡೋದು ಯಾವುದೂ ನಾಟಕ ಅಲ್ಲ. ನಟನೆ ಮಾಡಿ ಬದುಕೋದು ಅವನಿಗೆ ಬರಲ್ಲ” ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಡ್ಯಾನ್ಸ್‌ ಪ್ರಾಕ್ಟಿಸ್‌ ಸಮಯದಲ್ಲೂ ಗಿಲ್ಲಿಯ ಸರಳತೆ ಅದೆ ಹಾಗೆ ಇದ್ದಿತ್ತಂತೆ. “ಅವನು ಚೆನ್ನಾಗಿ ರೆಡಿ ಆಗಬೇಕು ಅನ್ನೋ ಯೋಚನೆಯೇ ಅವನಿಗೆ ಬರಲ್ಲ. ಅವನು ಹೇಗಿದ್ದಾನೋ ಹಾಗೇ ಇರುತ್ತಾನೆ. ಜನ ಅವನ ಮಾತು ಮಾತ್ರ ನೋಡಿದ್ದಾರೆ, ಅವನು ಒಳಗಿನಿಂದ ಹೇಗಿದ್ದಾನೆ ಅನ್ನೋದನ್ನ ಅಷ್ಟಾಗಿ ಗಮನಿಸಿಲ್ಲ” ಎಂದು ಯಶಸ್ವಿನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಹೇಳಿಕೆಗಳ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗುತ್ತಿದೆ. “ನೀವು ಗಿಲ್ಲಿ ಬಗ್ಗೆ ಮಾತನಾಡಿದ್ದು ನೋಡಿ ನಿಮ್ಮ ಫ್ಯಾನ್‌ ಆಗಿಬಿಟ್ಟೆವು”, “ನಿಮಗೆ ಒಳ್ಳೆ ಮನಸ್ಸಿದೆ” ಎಂದು ಗಿಲ್ಲಿ ಅಭಿಮಾನಿಗಳು ಯಶಸ್ವಿನಿಗೆ ಕಮೆಂಟ್‌ ಮಾಡುತ್ತಿದ್ದಾರೆ.

ಇನ್ನೂ ಬಿಗ್‌ ಬಾಸ್‌ ಮನೆಯಲ್ಲಿ ಗಿಲ್ಲಿ ಫೇಕ್‌ ಆಗಿ ನಟಿಸುತ್ತಿದ್ದಾನೆ ಎಂದು ಕೆಲ ಸ್ಪರ್ಧಿಗಳು, ಅಶ್ವಿನಿ ಸೇರಿದಂತೆ, ಆರೋಪಿಸಿದ್ದರೂ ಫ್ಯಾಮಿಲಿ ರೌಂಡ್‌ ವೇಳೆ ಬಂದ ದೃಶ್ಯಗಳು ಆ ಎಲ್ಲ ಮಾತುಗಳಿಗೆ ಉತ್ತರವಾಗಿದ್ದವು. ಗಿಲ್ಲಿಯ ತಾಯಿ ಸವಿತಾ ಅವರು ಮಗನ ತಲೆಗೆ ಎಣ್ಣೆ ಹಚ್ಚುತ್ತಾ, “ನೀನು ಹೊರಗೆ ಹೇಗಿದ್ದೀಯೋ ಇಲ್ಲಿಯೂ ಹಾಗೇ ಇದ್ದೀಯ. ಅದೇ ನನಗೆ ಖುಷಿ. ನಿಮ್ಮ ಅಪ್ಪ ತುಂಬಾ ಖುಷಿಯಾಗಿದ್ದಾರೆ” ಎಂದು ಹೇಳಿದ್ದು ಪ್ರೇಕ್ಷಕರ ಮನ ಗೆದ್ದ ಕ್ಷಣವಾಗಿತ್ತು.

“ಹೊರಗೆ ನಾನು ಹೇಗಿದ್ದೀನೋ, ಒಳಗೂ ಹಾಗೇ ಇರಬೇಕು. ಆಗಲೇ ಎಲ್ಲವೂ ಒಳ್ಳೆಯದಾಗುತ್ತದೆ” ಎಂದು ಗಿಲ್ಲಿ ಹೇಳಿದ್ದ ಮಾತುಗಳು ಇದೀಗ ಅವನ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿವೆ.