ಡಬಲ್ ಮರ್ಡರ್ ಮಾಡಿ ಬಂದವನು ಮನೆಯಲ್ಲೇ ಮಲಗಿದ್ದ, ಅಪ್ಪ-ಅಣ್ಣನನ್ನು ಕೊಂದವನು ಅದೆಂಥ ಕ್ರೂರಿ!

The accused who committed the double murder was sleeping peacefully at home and even called his sister to inform her about it, which is shocking.

ಪ್ರತಾಪ್ ಹಿರೀಸಾವೆ

ಹಾಸನ: ಆಸ್ತಿ ವಿಚಾರಕ್ಕೆ ತಂದೆ ಮತ್ತು ಅಣ್ಣನನ್ನು ಬರ್ಬರವಾಗಿ ಕೊಚ್ಚಿ ಕೊಲೆಗೈದಿರುವ ಘಟನೆ ಹೊಳೆನರಸೀಪುರ ತಾಲ್ಲೂಕಿನ ಗಂಗೂರು ಗ್ರಾಮದಲ್ಲಿ ನಡೆದಿದೆ. ಡಬಲ್ ಮರ್ಡರ್ ಮಾಡಿದ ಆರೋಪಿ ನಿರಮ್ಮಳವಾಗಿ ಮನೆಯಲ್ಲೆ ಮಲಗಿದ್ದಲ್ಲದೇ ತನ್ನ ಸಹೋದರಿಗೆ ಕರೆ ಮಾಡಿ ತಾನೇ ವಿಷಯ ತಿಳಿಸಿರುವುದು ಬೆಚ್ಚಿ ಬೀಳಿಸುವಂತಿದೆ.

ಗ್ರಾಮದ ದೇವೇಗೌಡ (70), ಮಂಜುನಾಥ (50) ಕೊಲೆಯಾದ ತಂದೆ ಮಗ. ದೇವೇಗೌಡ ಪುತ್ರ ಮೋಹನ್(47) ನಿಂದಲೇ ಜೋಡಿ ಕೊಲೆಯಾಗಿದ್ದು, ಈ ಡಬಲ್ ಮರ್ಡರ್ ಗೆ ಜನರು ಬೆಚ್ಚಿ ಬಿದ್ದಿದ್ದಾರೆ.

ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಘಟನೆಯ ಹಿನ್ನೆಲೆ:

ಸಾಲ ಮಾಡಿದ್ದರಿಂದ ಕೆಲವು ದಿನಗಳ ಹಿಂದೆ ತಂದೆ ದೇವೇಗೌಡ ಸ್ವಯಾರ್ಜಿತ ಆಸ್ತಿ ಮಾರಾಟ ಮಾಡಿದ್ದರು, ಆಸ್ತಿ ಮಾರಾಟ ಮಾಡಿದ ಹಣ ನೀಡಿಲ್ಲ ಎಂದು ಪುತ್ರ ಮೋಹನ್ ಗಲಾಟೆ ಮಾಡಿದ್ದ.

ಇದೇ ವಿಚಾರಕ್ಕೆ ತಂದೆ ಹಾಗೂ ಇಬ್ಬರು ಮಕ್ಕಳ ನಡುವೆ ಗಲಾಟೆಯೂ ನಡೆದಿತ್ತು. ಈ ವೇಳೆ ಹಿರಿಯ ಮಗ ಮಂಜುನಾಥ್ ಬೈಯ್ದು ಮನೆಯಿಂದ ಮೋಹನ್ ನನ್ನು ಹೊರ ಕಳಿಸಿದ್ದ. ಇದರಿಂದ ಕೋಪಗೊಂಡ  ಮೋಹನ್ ಪ್ಲಾನ್ ಮಾಡಿಕೊಂಡು ಮಲಗಿದ್ದಾಗ ಜುಲೈ 10 ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಮನೆಯ ಗೋಡೆ ಹಾರಿ ಬಂದು, ಮೊದಲು ಅಣ್ಣ ಮಂಜುನಾಥ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ, ತಂದೆ ದೇವೇಗೌಡ ಹಲ್ಲೆಯಾಗೋದನ್ನ ತಡೆಯಲು ಮುಂದಾಗಿದ್ದಾನೆ. ಈ ವೇಳೆ ತಂದೆ ಮೇಲೆಯೂ ಮಚ್ಚು ಕೊಡಲಿಯಿಂದ ಬರ್ಬರ ಅಟ್ಯಾಕ್ ಮಾಡಿದ್ದಾನೆ ಕ್ರೂರಿ ಪುತ್ರ.

ಇತ್ತ ಮಗನನ್ನ ತಡೆಯಲು ಬಂದ ತಾಯಿ ಮೇಲೂ ಹಲ್ಲೆ ಗೆ ಯತ್ನಿಸಿದಾಗ, ಮನೆಯಿಂದ ಹೊರ ಬಂದು ಓಡಿಹೋಗಿ ತಾಯಿ ಜಯಮ್ಮ ಪ್ರಾಣ ಉಳಿಸಿಕೊಂಡು, ರಾತ್ರಿ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ.

ಕೊಲೆ ಮಾಡಿ ಮನೆಯಲ್ಲಿಯೇ ಮಲಗಿದ್ದ ಆರೋಪಿ

ತಂದೆ ಹಾಗೂ ಸಹೋದರನನ್ನು ಕೊಲೆ ಮಾಡಿ ಮನೆಯ ಮತ್ತೊಂದು ಭಾಗದಲ್ಲಿ ಆರೋಪಿ ಮೋಹನ್ ಮಲಗಿದ್ದ, ಕೊಲೆ ಮಾಡಿ ಅಕ್ಕನಿಗೆ ಫೋನ್ ಮಾಡಿ ಮಾಹಿತಿಯನ್ನೂ ಕೊಟ್ಟಿದ್ದಾನೆ. ಅಪ್ಪ ಹಾಗೂ ಅಣ್ಣನನ್ನ ಕೊಲೆ‌ ಮಾಡಿದಿನಿ ನನಗೂ ಏಟಾಗಿದೆ ಬಂದು ಆಸ್ಪತ್ರೆಗೆ ಸೇರಿಸು ಎಂದು ಫೋನ್ ಮಾಡಿದ್ದಾನೆ. ಸಹೋದರಿ ಗಾಬರಿಗೊಂಡು ಊರಿಗೆ ಬಂದು ನೋಡಿದಾಗ, ಇಬ್ಬರನ್ನೂ ಕೊಲೆ ಮಾಡಿ ಮನೆಯಲ್ಲೇ ಮಲಗಿದ್ದುದು ತಿಳಿದುಬಂದಿದೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದಾಗ, ಸ್ಥಳಕ್ಕೆ ಬಂದ ಹೊಳೆನರಸೀಪುರ ಪೊಲೀಸರು ಆರೋಪಿ ಮೋಹನ್ ನನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.