ಬೆಂಗಳೂರು (KannadaPost.com): ದಳಪತಿ ವಿಜಯ್ (Thalapathy Vijay) ಅವರ ಬಹುನಿರೀಕ್ಷಿತ ಹಾಗೂ ಅವರ ಸಿನಿಪಯಣದ ಕೊನೆಯ ಚಿತ್ರ ಎನ್ನಲಾಗಿರುವ ‘ಜನ ನಾಯಕನ್’ (Jana Nayagan) ಬಿಡುಗಡೆಗೂ ಮುನ್ನವೇ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ “ಟೈಮ್ ಖರಾಬ್! ಜನ ನಾಯಕನ್ ಸಿನಿಮಾ ಲೀಕ್ ಆಯ್ತಂತೆ!” ಎಂಬ ಆತಂಕದ ಪೋಸ್ಟ್‌ಗಳು ಹರಿದಾಡುತ್ತಿದ್ದು, ಚಿತ್ರದ ನಿರ್ಮಾಣ ಸಂಸ್ಥೆ KVN ಪ್ರೊಡಕ್ಷನ್ಸ್ (KVN Productions) ಈ ಬಗ್ಗೆ ಕಠಿಣ ಕಾನೂನು ಕ್ರಮದ ಎಚ್ಚರಿಕೆ ನೀಡಿದೆ.
KVN ಪ್ರೊಡಕ್ಷನ್ಸ್‌ನಿಂದ ‘ಪಬ್ಲಿಕ್ ನೋಟಿಸ್’
ಸಿನಿಮಾ ಲೀಕ್ ಆಗಿರುವ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಕೆವಿಎನ್ ಪ್ರೊಡಕ್ಷನ್ಸ್ ಸಾರ್ವಜನಿಕ ಪ್ರಕಟಣೆಯೊಂದನ್ನು (Public Notice) ಹೊರಡಿಸಿದೆ. “ನಾವು ಜನ ನಾಯಕನ್ ಚಿತ್ರದ ನಿರ್ಮಾಪಕರು ಹಾಗೂ ಹಕ್ಕುಸ್ವಾಮ್ಯ (Copyright) ಹೊಂದಿರುವವರು. ನಮ್ಮ ಚಿತ್ರದ ಕೆಲವು ದೃಶ್ಯಗಳು ಹಾಗೂ ಬಹುಪಾಲು ಸಿನಿಮಾ ಕಾನೂನುಬಾಹಿರವಾಗಿ ಕೆಲವರಿಂದ ಕಾಪಿ ಮಾಡಲ್ಪಟ್ಟು ಹಂಚಿಕೆಯಾಗುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಇದು ಡಿಜಿಟಲ್ ಪೈರಸಿಯ ಗಂಭೀರ ಬೆದರಿಕೆಯಾಗಿದೆ,” ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.
ಪ್ರಕಟಣೆಯ ಪ್ರಮುಖ ಅಂಶಗಳು:
- ಕ್ರಿಮಿನಲ್ ಅಪರಾಧ: ಲೀಕ್ ಆದ ಕಂಟೆಂಟ್ ಅನ್ನು WhatsApp, Telegram, Instagram, Facebook, X, YouTube, ಟೊರೆಂಟ್ಸ್ ಅಥವಾ ಯಾವುದೇ ಮಾಧ್ಯಮದ ಮೂಲಕ ಡೌನ್‌ಲೋಡ್ ಮಾಡುವುದು, ವೀಕ್ಷಿಸುವುದು, ಶೇಖರಿಸಿಡುವುದು, ಫಾರ್ವರ್ಡ್ ಮಾಡುವುದು ಅಥವಾ ಹಂಚಿಕೊಳ್ಳುವುದು ಕ್ರಿಮಿನಲ್ ಅಪರಾಧವಾಗಿದೆ.
- ಕಠಿಣ ಕ್ರಮ: ಈಗಾಗಲೇ ಫೋರೆನ್ಸಿಕ್ ತನಿಖೆ ಸೇರಿದಂತೆ ಅಗತ್ಯ ತನಿಖೆಗಳನ್ನು ಆರಂಭಿಸಲಾಗಿದೆ. ಈ ಜಾಲದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರ ವಿರುದ್ಧವೂ ಯಾವುದೇ ಮುಲಾಜಿಲ್ಲದೆ ಕಠಿಣ ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು.
- ತಕ್ಷಣ ಡಿಲೀಟ್ ಮಾಡಿ: ಲೀಕ್ ಆದ ವಿಡಿಯೋಗಳನ್ನು ಸಾರ್ವಜನಿಕರು ಯಾವುದೇ ಕಾರಣಕ್ಕೂ ವೀಕ್ಷಿಸಬಾರದು. ಒಂದು ವೇಳೆ ಇಂತಹ ವಿಡಿಯೋಗಳು ಬಂದರೆ, ಅವುಗಳನ್ನು ಓಪನ್ ಮಾಡದೆ, ಶೇಖರಿಸದೆ ಅಥವಾ ಇತರರಿಗೆ ಫಾರ್ವರ್ಡ್ ಮಾಡದೆ ತಕ್ಷಣವೇ ಡಿಲೀಟ್ ಮಾಡಬೇಕು ಎಂದು ಖಡಕ್ ಎಚ್ಚರಿಕೆ ನೀಡಲಾಗಿದೆ.
ರಾಜಕೀಯ ಪ್ರವೇಶಕ್ಕೂ ಮುನ್ನವೇ ವಿಘ್ನ
ದಳಪತಿ ವಿಜಯ್ ಅವರು ಪೂರ್ಣಪ್ರಮಾಣದಲ್ಲಿ ರಾಜಕೀಯಕ್ಕೆ ಧುಮುಕುವ ಮುನ್ನ ನಟಿಸುತ್ತಿರುವ ಕೊನೆಯ ಚಿತ್ರವಾಗಿರುವುದರಿಂದ (Thalapathy 69) ‘ಜನ ನಾಯಕನ್’ ಮೇಲೆ ಅಪಾರ ನಿರೀಕ್ಷೆಗಳಿದ್ದವು. ಎಚ್. ವಿನೋತ್ ನಿರ್ದೇಶನದ ಈ ಚಿತ್ರವನ್ನು ಬೃಹತ್ ಬಜೆಟ್‌ನಲ್ಲಿ ನಿರ್ಮಿಸಲಾಗಿದೆ. ಬಿಡುಗಡೆಗೆ ಮುನ್ನವೇ ಚಿತ್ರದ ಬಹುಪಾಲು ದೃಶ್ಯಗಳು ಆನ್‌ಲೈನ್‌ನಲ್ಲಿ ಲೀಕ್ ಆಗಿರುವುದು ಚಿತ್ರತಂಡಕ್ಕೆ ದೊಡ್ಡ ಆಘಾತ ತಂದಿದೆ.










