Hassan|ಹಾಸನ: ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಪರಿಣಾಮವಾಗಿ ಮಾರುಕಟ್ಟೆಯಲ್ಲಿ ವಾಣಿಜ್ಯ ಬಳಕೆ ಸಿಲಿಂಡರ್‌ಗಳ ಕೊರತೆ Hassan cylinder shortage)ಉಂಟಾಗಿದ್ದು, ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಸಣ್ಣ ಹೋಟೆಲ್ ಮಾಲೀಕರಿಗೆ ಆಹಾರ ಇಲಾಖೆ ಹಾಗೂ ಎಚ್‌ಪಿ ಗ್ಯಾಸ್ (HP Gas) ಕಂಪನಿ ನೆರವಿಗೆ ಧಾವಿಸಿವೆ.
ವಾಣಿಜ್ಯ ಸಿಲಿಂಡರ್ ಕೊರತೆಯಿಂದಾಗಿ ಹಾಸನ ನಗರದ ಎಂ.ಜಿ. ರಸ್ತೆಯಲ್ಲಿರುವ ಭಗತ್‌ಸಿಂಗ್ ಫುಡ್‌ಕೋರ್ಟ್ ಸೇರಿದಂತೆ ಬಹುತೇಕ ಚಿಕ್ಕ ಹೋಟೆಲ್‌ಗಳು ಬಾಗಿಲು ಮುಚ್ಚಿದ್ದವು. ವ್ಯಾಪಾರವಿಲ್ಲದೆ ಸಣ್ಣ ಹೋಟೆಲ್ ಮಾಲೀಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು.
ದಾಳಿ ನಡೆಸಿದ್ದ ಅಧಿಕಾರಿಗಳು:
ಸಿಲಿಂಡರ್ ಕೊರತೆಯ ನಡುವೆ ಅನಿವಾರ್ಯವಾಗಿ ವಾಣಿಜ್ಯ ಸಿಲಿಂಡರ್ ಬದಲಿಗೆ ಗೃಹಬಳಕೆ ಸಿಲಿಂಡರ್ ಬಳಸುತ್ತಿದ್ದವರ ಮೇಲೆ ಇತ್ತೀಚೆಗಷ್ಟೇ ಆಹಾರ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ಪ್ರಕರಣ ದಾಖಲಿಸಿದ್ದರು. ಇದರಿಂದಾಗಿ ವ್ಯಾಪಾರಿಗಳಲ್ಲಿ ಮತ್ತಷ್ಟು ಆತಂಕ ಮನೆಮಾಡಿತ್ತು ಹಾಗೂ ಬಹುತೇಕರು ಹೋಟೆಲ್ ಮುಚ್ಚಿದ್ದರು.
5 ಕೆಜಿ ಸಿಲಿಂಡರ್ ವಿತರಣೆ:
ಸಣ್ಣ ವ್ಯಾಪಾರಿಗಳ ಈ ಸಂಕಷ್ಟಕ್ಕೆ ಸ್ಪಂದಿಸಿದ ಆಹಾರ ಇಲಾಖೆ ಹಾಗೂ ಎಚ್‌ಪಿ ಗ್ಯಾಸ್ ಕಂಪನಿಯು, ಫುಡ್ ಕೋರ್ಟ್‌ನಲ್ಲಿ ಬಾಗಿಲು ಮುಚ್ಚಿದ್ದ ಹೋಟೆಲ್‌ಗಳಿಗೆ ತಲಾ 5 ಕೆಜಿ ತೂಕದ ವಾಣಿಜ್ಯ ಬಳಕೆ ಸಿಲಿಂಡರ್‌ಗಳನ್ನು ವಿತರಿಸುವ ಮೂಲಕ ನೆರವಾಗಿದೆ. ಹಾಸನ ಗ್ಯಾಸ್ ಸಪ್ಲೈ ವತಿಯಿಂದ ಕೇವಲ 613 ರೂಪಾಯಿಗೆ ಐದು ಕೆಜಿ ವಾಣಿಜ್ಯ ಸಿಲಿಂಡರ್‌ಗಳನ್ನು ಆಹಾರ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ವಿತರಿಸಲಾಯಿತು.
ಗ್ಯಾಸ್ ಖಾಲಿಯಾದ ಕೂಡಲೇ ಬುಕ್ ಮಾಡಿದರೆ ತಕ್ಷಣವೇ ಮತ್ತೊಂದು ಸಿಲಿಂಡರ್ ವಿತರಿಸುವುದಾಗಿ ಎಚ್‌ಪಿ ಕಂಪನಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಬಿಕ್ಕಟ್ಟಿನ ಸಮಯದಲ್ಲಿ ಸಕಾಲದಲ್ಲಿ ಸ್ಪಂದಿಸಿದ ಆಹಾರ ಇಲಾಖೆ ಹಾಗೂ ಎಚ್‌ಪಿ ಗ್ಯಾಸ್ ಕಂಪನಿಗೆ ಹೋಟೆಲ್ ಮಾಲೀಕರು ಕೃತಜ್ಞತೆ ಸಲ್ಲಿಸಿದ್ದು, ಸದ್ಯ ಫುಡ್ ಕೋರ್ಟ್‌ನ ಸಣ್ಣ ವ್ಯಾಪಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ.










