ಚನ್ನರಾಯಪಟ್ಟಣ: ಗೊಬ್ಬರದಂಗಡಿ ಮೇಲೆ ತಹಶೀಲ್ದಾರ್‌ ದಾಳಿ

ಚನ್ನರಾಯಪಟ್ಟಣ: ತಾಲೂಕಿನ ಹಲವು ಕಡೆಗಳಲ್ಲಿ ಯೂರಿಯಾ ಗೊಬ್ಬರವನ್ನು ದಾಸ್ತಾನು ಮಾಡಿರುವ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಿಶೀಲಿಸಲು ಆದೇಶಿಸಿದ ಹಿನ್ನೆಲೆಯಲ್ಲಿ ತಾಲೂಕು ದಂಡಾಧಿಕಾರಿ ಜಿ.ಎಸ್.ಶಂಕರಪ್ಪ ಗುರುವಾರ ತಡರಾತ್ರಿ ಗೊಬ್ಬರದಂಗಡಿಗಳ ಮೇಲೆ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದರು.

ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರ ಜೊತೆಯಲ್ಲಿ ತಾಲೂಕಿನ ಹಲವು ಅಂಗಡಿ, ಗೋದಾಮುಗಳಿಗೆ ಭೇಟಿ ನೀಡಿದ ತಹಶೀಲ್ದಾರ್, ದಾಸ್ತಾನು ಬಗ್ಗೆ ಮಾಹಿತಿ ಪಡೆದುಕೊಂಡರು. ಪೂರೈಕೆ, ಸಂಗ್ರಹ ಹಾಗೂ ಮಾರಾಟದ ಬಗ್ಗೆ ದಾಖಲೆ ಸಮೇತ ವಿವರಣೆ ಪಡೆದರು.

ತಾಲೂಕಿನಲ್ಲಿ ಯೂರಿಯಾ ಗೊಬ್ಬರದ ಅಭಾವ ಸೃಷ್ಟಿಸುವವರು ಹಾಗೂ ಯೂರಿಯಾವನ್ನು ಅಕ್ರಮವಾಗಿ ಖರೀದಿಸಿ ದಾಸ್ತಾನು ಇರಿಸಿ ದುಪ್ಪಟ್ಟು ಬೆಲೆಗೆ ಮಾರುತ್ತಿರುವದರ ಮೇಲೆ ಕ್ರಮ ಕೈಗೊಳ್ಳಲು ಹಲವು ಗೋದಾಮುಗಳಲ್ಲಿ ದಿಢೀರ್ ಭೇಟಿ ನೀಡಿ ಪರಿಶೀಲಿಸಲಾಯಿತು.

ಪರಿಶೀಲನೆ ಸಂದರ್ಭದಲ್ಲಿ ಯಾವುದೇ ಅಕ್ರಮ ದಾಸ್ತಾನು ಕಂಡುಬಂದಿಲ್ಲ. ಮುಂದಿನ ದಿನಗಳಲ್ಲಿ ಪುನಃ ದಿಢೀರ್ ಭೇಟಿ ಇರಲಿದೆ ಎಂದ ಅವರು, ರೈತರಿಗೆ ಸಮರ್ಪಕವಾಗಿ ರಸಗೊಬ್ಬರ ಸಿಗುವ ನಿಟ್ಟಿನಲ್ಲಿ ಪರಿಸೀಲನೆ ಕೈಗೊಂಡು ತಾಲೂಕಿನ ವ್ಯಾಪ್ತಿಯ ರೈತರಿಗೆ ಯಾವುದೇ ಕೃತಕ ಅಭಾವ ಸೃಷ್ಟಿಸದೆ ರಸಗೊಬ್ಬರಗಳನ್ನು ನಿಗದಿತ ದರದಲ್ಲಿ ಮಾರಾಟ ಮಾಡಳು ಸೂಚನೆ ನೀಡಲಾಯಿತು.

ತಹಶೀಲ್ದಾರ್ ಜೊತೆಯಲ್ಲಿ ಸಹಾಯಕ ಕೃಷಿ ನಿರ್ದೇಶಕ ಕೆ.ಮೋಹನ್ ಕುಮಾರ್, ಚನ್ನರಾಯಪಟ್ಟಣ ಉಪ ವಿಭಾಗ ಪೊಲೀಸ್ ಉಪ ಅಧೀಕ್ಷಕ ಎನ್.ಕುಮಾರ್, ನಗರ ವೃತ್ತ ನಿರೀಕ್ಷಕ ಎಸ್.ಎಂ.ರಘುಪತಿ, ಪೊಲೀಸ್ ಉಪ ಆರಕ್ಷಕ ಎಸ್.ಕೆ.ಮಲ್ಲಪ್ಪ ಗ್ರಾಮ ಲೆಕ್ಕಾಧಿಕಾರಿ ಶ್ರೀಧರ್ ಸೇರಿದಂತೆ ಇತರರು ಇದ್ದರು.