ಆಲೂರು: ‘ನನ್ನ ಮತ ನನ್ನ ಹಕ್ಕು’ ಕಾರ್ಯಕ್ರಮ – ಯುವಜನರಲ್ಲಿ ಮತದಾನ ಜಾಗೃತಿ ಮೂಡಿಸಿದ ತಾಲ್ಲೂಕು ಆಡಳಿತ

ಆಲೂರು: ಯುವಜನರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ, ನಾಗರಿಕ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವ ಹಾಗೂ ಸಂವಿಧಾನಿಕ ಮೌಲ್ಯಗಳನ್ನು ಬಲಪಡಿಸುವ ಉದ್ದೇಶವನ್ನು ‘ ನನ್ನ ಮತ ನನ್ನ ಹಕ್ಕು’ ಎಂಬ ಕಾರ್ಯಕ್ರಮವು ಹೊಂದಿದೆ ಎಂದು ತಹಸೀಲ್ದಾರ್ ಮಲ್ಲಿಕಾರ್ಜುನ್ ಹೇಳಿದರು.

ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಸಂಬಂಧ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ ಪಂಚಾಯಿತಿ ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಹಭಾಗಿತ್ವದಲ್ಲಿ ವಿದ್ಯಾರ್ಥಿಗಳಿಗೆ ‘ನನ್ನ ಮತ ನನ್ನ ಹಕ್ಕು’ ವಿಷಯ ಕುರಿತು ಏರ್ಪಡಿಸಲಾಗಿದ್ದ ಭಾಷಣ ಸ್ಪರ್ಧೆ, ಚಿತ್ರಕಲೆ ಮತ್ತು ಪ್ರಬಂಧ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಜಾಪ್ರಭುತ್ವದ ಮೌಲ್ಯಗಳ ಸೃಜನಶೀಲ ಅಭಿವ್ಯಕ್ತಿತ್ವವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸರ್ಕಾರವು ಶಿಕ್ಷಣ ಇಲಾಖೆಯ ನೇತೃತ್ವದಲ್ಲಿ ತಾಲ್ಲೂಕು, ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲೆ ಸ್ಪರ್ಧೆಗಳನ್ನು ಹಮ್ಮಿಕೊಂಡಿದ್ದು ವಿದ್ಯಾರ್ಥಿಗಳಿಗೆ ದೈನಂದಿನ ಜೀವನದಲ್ಲಿ ಪ್ರಜಾಪ್ರಭುತ್ವದ ಪಾತ್ರವನ್ನು ಚಿತ್ರಗಳ ಮೂಲಕ ಪ್ರದರ್ಶಿಸುವ ನಿಟ್ಟಿನಲ್ಲಿ ಉನ್ನತ ಶಿಕ್ಷಣ ಇಲಾಖೆಯು ಛಾಯಾಚಿತ್ರ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ‘ನನ್ನ ಮತ, ನನ್ನ ಹಕ್ಕು’, ಸಂವಿಧಾನದ ಪೀಠಿಕೆ ಮತ್ತು ಮಹಾತ್ಮ ಗಾಂಧೀಜಿ ಅವರ ದೃಷ್ಟಿಕೋನದಲ್ಲಿ ‘ಗಾಂಧಿ ಭಾರತ’ ಈ ಮೂರು ವಿಷಯಗಳು ಭಾಷಣ ವಿಷಯ ವಸ್ತುವಾಗಿದೆ ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಬ್ರಹ್ಮಣ್ಯ ಶರ್ಮ ಮಾತನಾಡಿ, ರಾಜ್ಯಸರ್ಕಾರವು “ನನ್ನ ಮತ ನನ್ನ ಹಕ್ಕು” ಎಂಬ ಶೀರ್ಷಿಕೆಯಡಿ ಆಯೋಜಿಸಲು ನಿರ್ದೇಶಿಸಿರುವ ಈ ಕಾರ್ಯಕ್ರಮವು ಸಂವಿಧಾನ ನೀಡಿರುವ ಪ್ರಜಾಪ್ರಭುತ್ವ ಮಹತ್ವ ಅರಿಯಲು ಮತ್ತು ಮತದಾನ ಹಕ್ಕು, ಮೂಲಭೂತ ಕರ್ತವ್ಯಗಳ ಕುರಿತು ಯುವಪೀಳಿಗೆಗೆ ಜಾಗೃತಿ ಮೂಡಿಸುವುದಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಪ್ರಜಾಪ್ರಭುತ್ವದ ಕುರಿತು ಜಾಗೃತಿ ಮೂಡಿಸಲು ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ವಿವಿಧ ಕಾರ್ಯಕ್ರಮಗಳು, ಚರ್ಚಾಕೂಟಗಳು ಮತ್ತು ವಿಚಾರ ಸಂಕಿರಣಗಳನ್ನು ಮತ್ತು ಪ್ರಜಾಪ್ರಭುತ್ವ ಕುರಿತಾದ ಚಿತ್ರಕಲೆ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು, 8-10ನೇ ತರಗತಿ ವಿದ್ಯಾರ್ಥಿಗಳಿಗೆ ಚಿತ್ರಕಲಾ ಮತ್ತು ಪಿಯುಸಿಯಿಂದ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವ ಯಶಸ್ವಿಯಲ್ಲಿ ಮತದಾನದ ಪಾತ್ರ ಕುರಿತು ಚರ್ಚಾ ಸ್ಪರ್ಧೆ, ಭಾಷಣ ಸ್ಪರ್ಧೆ ಏರ್ಪಡಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣಾಧಿಕಾರಿ ಕೌಸರ್ ಅಹಮದ್, ಪ್ರಭಾರ ಕ್ಷೇತ್ರ ಸಮನ್ವಯಾಧಿಕಾರಿ ವಿಜಯಕುಮಾರ್, ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಶಕುಂತಲಾ ಶೆಟ್ಟಿ, ಪ್ರಭಾರ ಸರ್ಕಾರಿ ನೂತನ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಭೂಪಾಲಯ್ಯ, ಸಮೂಹ ಸಂಪನ್ಮೂಲ ವ್ಯಕ್ತಿ ಜಯಂತಿ, ಚಿತ್ರಕಲಾ ಶಿಕ್ಷಕ ಬಿ.ಎಸ್. ದೇಸಾಯಿ, ಶಿಕ್ಷಕರು ಸೇರಿದಂತೆ ವಿವಿಧ ಶಾಲೆಗಳ ಶಿಕ್ಷಕರು, ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.