ಹಾಸನ: ಸರಕಾರ ನೀಡುತ್ತಿರುವ ನಿಗಮದ ಸಾಲ ಯೋಜನೆ, ವಿದ್ಯಾರ್ಥಿವೇತನ ಮತ್ತು ತರಬೇತಿ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷ ಸುಜ್ಞಾನಮೂರ್ತಿ ಪುಟ್ಟಾಚಾರ್ ಹೇಳಿದರು.
ನಗರದ ಶ್ರಿ ಕಾಳಿಕಾಂಬ ಕಮಠೇಶ್ವರ ದೇವಾಲಯದ ವಿಶ್ವಕರ್ಮ ಸಭಾಂಗಣದಲ್ಲಿ ಸೋಮವಾರ ಹಾಸನ ಜಿಲ್ಲಾ ವಿಶ್ವಕರ್ಮ ಸಮಾಜ ಮತ್ತು ತಾಲೂಕು ವಿಶ್ವಕರ್ಮ ಸಮಾಜದ ಸಂಯುಕ್ತಾಶ್ರಯದಲ್ಲಿ ನಡೆದ ರಾಜ್ಯ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷರ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ವಿಶ್ವಕರ್ಮರು ಈ ದೇಶದ ಶಿಲ್ಪಶಕ್ತಿ, ತಾಂತ್ರಿಕ ಜ್ಞಾನ ಮತ್ತು ಕೌಶಲ್ಯದ ಜೀವಂತ ರೂಪ. ಸಮಾಜದ ಅಸ್ತಿತ್ವ, ಸಂಸ್ಕ್ರತಿ ಮತ್ತು ಅಭಿವೃದ್ಧಿಗೆ ವಿಶ್ವಕರ್ಮ ಸಮುದಾಯದ ಕೊಡುಗೆ ಅನನ್ಯ ಎಂದರು. ಆದರೆ ಇಂದು ಸಮಾಜದ ಬಹುಭಾಗವು ಶಿಕ್ಷಣ ಹಾಗೂ ಉದ್ಯೋಗದ ಅಭಾವದಿಂದ ಹಿಂದುಳಿದಿದೆ. ಇದರ ನಿವಾರಣೆಗೆ ನಿಗಮದ ಮೂಲಕ ಪ್ರತಿ ತಾಲೂಕಿನಲ್ಲಿ ತರಬೇತಿ ಕೇಂದ್ರಗಳು, ಉದ್ಯೋಗ ಉತ್ಪಾದಕ ಯೋಜನೆಗಳನ್ನು ಜಾರಿಗೆ ತರಲು ಪ್ರಯತ್ನ ಮಾಡಲಾಗುವುದು ಎಂದರು.
ಯುವಕರು ತಾಂತ್ರಿಕ ವಿದ್ಯಾಭ್ಯಾಸದತ್ತ ಹೆಚ್ಚು ಒಲವು ತೋರಬೇಕು. ನನ್ನ ನೇತೃತ್ವದಲ್ಲಿ ನಿಗಮವು ಕಚೇರಿಯ ಕಾಗದಗಳಲ್ಲಿ ಸೀಮಿತವಾಗದೇ, ಜನರ ಬಾಗಿಲಿಗೆ ತಲುಪುವ ರೀತಿಯಲ್ಲಿ ಕೆಲಸ ಮಾಡಲಿದೆ ಸಮುದಾಯದ ಅಭಿವೃದ್ಧಿಗೆ ನಿಗಮವನ್ನು ಸೇವಾ ವೇದಿಕೆಯಾಗಿ ಬಳಸುತ್ತೇನೆ ಎಂದು ಭರವಸೆ ನೀಡಿದರು.
ಜಿಲ್ಲಾ ವಿಶ್ವಕರ್ಮ ಸಮಾಜದ ಅಧ್ಯಕ್ಷ ಎಚ್.ವಿ.ಹರೀಶ್ ಮಾತನಾಡಿ, ಸಮುದಾಯದ ಏಕತೆ ಮತ್ತು ಸಹಕಾರದಿಂದ ನಿಗಮದ ಗುರಿ ಸಾಧನೆಗೆ ಸಾಧ್ಯ ಎಂದರು. ರಾಜ್ಯ ಉಪಾಧ್ಯಕ್ಷ ಜಿ. ಕುಮಾರ್, ಮಾಜಿ ಉಪಾಧ್ಯಕ್ಷ ವಾಸುದೇವ್, ಜಿಲ್ಲಾ ಉಪಾಧ್ಯಕ್ಷ ಎ.ಸಿ. ನಾರಾಯಣ, ಕೆ.ವಿ. ಯೋಗೇಶ್, ಖಜಾಂಚಿ ಜಗದೀಶ್, ತಾಲ್ಲೂಕು ವಿಶ್ವಕರ್ಮ ಸಮಾಜದ ಉಪಾಧ್ಯಕ್ಷ ಬ್ಯಾಟರಂಗಾಚಾರ್, ಸಮಾಜದ ಪ್ರಮುಖರಾದ ಆನಂದ್, ಶಿವಶಂಕರ್, ಜಯರಾಜ್, ಲೋಕೇಶ್, ಸುರೇಶ್ ತಾಲೂಕು ಸಮಾಜದ ಮುಖಂಡರು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಭಾರಿ ಸಂಖ್ಯೆಯ ಸಮಾಜ ಬಾಂಧವರು ಹಾಜರಿದ್ದರು.










