ಮಂಡ್ಯ : ನಗರದ ಗಾಂಧಿ ಭವನದಲ್ಲಿ ಶನಿವಾರ ನಡೆದ ದಿವಂಗತ ಚಲನಚಿತ್ರ ಹಾಗೂ ಕಿರುತೆರೆ ನಟ ಎಂ. ರವಿಪ್ರಸಾದ್ ಸ್ಮರಣಾರ್ಥ ರಾಜ್ಯಮಟ್ಟದ ಹವ್ಯಾಸಿ ರಂಗನಟ ಪ್ರಶಸ್ತಿ, ಜೀವನಾಡಿ ಸಾಹಿತ್ಯ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ಹಾಗೂ ವಿಶ್ವಾಸದ ವಿಮರ್ಶೆ ಕೃತಿ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಚಲನಚಿತ್ರ ಹಾಗೂ ಧಾರಾವಾಹಿ ನಿರ್ದೇಶಕ ಟಿ.ಎನ್. ಸೀತಾರಾಂ, “ಮಂಡ್ಯ ಎಂದಾಗ ಕೆಲ ಸಾಹಿತಿಗಳು ಹಾಗೂ ಸ್ಟಾರ್ ನಟರು ನೆನಪಾಗುತ್ತಾರೆ” ಎಂದು ಶ್ಲಾಘಿಸಿದರು.
ಲಿಡ್ಕರ್ ಎಂಡಿ ಕೆ.ಎಂ. ವಸುಂಧರಾ ಮಾತನಾಡಿದರು. ಕಸಾಪ ತಾಲ್ಲೂಕು ಘಟಕದ ಕಾರ್ಯದರ್ಶಿ ಪಟೇಲ್ ಪಾಂಡು ಅಧ್ಯಕ್ಷತೆ ವಹಿಸಿದ್ದರು. ಎಂ. ರವಿಪ್ರಸಾದ್ ಸ್ಮರಣಾರ್ಥ ರಾಜ್ಯಮಟ್ಟದ ರಂಗನಟ ಪ್ರಶಸ್ತಿ ಕಿರುತೆರೆ ಕಲಾವಿದ ರಾಜೇಶ್ ನಟರಂಗ ಅವರಿಗೆ ಪ್ರದಾನ ಮಾಡಲಾಯಿತು.
ಸಾಹಿತಿ ಎಸ್. ಶ್ರೀನಿವಾಸಶೆಟ್ಟಿ ಅವರು ವಿಶ್ವಾಸ್ ಡಿ. ಗೌಡರ ವಿಶ್ವಾಸದ ವಿಮರ್ಶೆ ಕೃತಿಯನ್ನು ಹಾಗೂ ಜೈ ಕರ್ನಾಟಕ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ಎಸ್. ನಾರಾಯಣಗೌಡ ಅವರು ಕೀರ್ತಿ ಕಿರಣ್‌ಕುಮಾರ್ ಅವರ ಕರೆಗಂಟೆ ಕೃತಿಯನ್ನು ಬಿಡುಗಡೆ ಮಾಡಿದರು.
ಮಹಾಕವಿ ಡಾ. ಪ್ರದೀಪ್ ಕುಮಾರ್ ಹೆಬ್ರಿ ಅವರು ಸಮಯದ ಅಭಾವದಿಂದ ಕಾರ್ಯಕ್ರಮಕ್ಕೆ ಹಾಜರಾಗಲಾರದೆ, ತಮ್ಮ ಹಿತ ನುಡಿಗಳನ್ನು ಬರಹದ ಮೂಲಕ ಕಳುಹಿಸಿ ಹಾರೈಸಿದರು. ಅವರು “ವಿಶ್ವಾಸ್ ಡಿ. ಗೌಡರ ವಿಶ್ವಾಸದ ವಿಮರ್ಶೆ ಕೃತಿ ಬೇರೆ ಬೇರೆ ಲೇಖಕರ ೪೦ ಕೃತಿಗಳನ್ನು ಪರಿಚಯಿಸುತ್ತದೆ. ಸರಿ-ತಪ್ಪು ಎರಡನ್ನೂ ಸಮನಾಗಿ ಹಿಡಿದುಕೊಂಡಿರುವ ಈ ಕೃತಿಯ ಓದಿನಿಂದ ಓದುಗರಿಗೆ ಆಯಾ ಕೃತಿಗಳ ಅರಿವು ದೊರೆಯುತ್ತದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
ಬೆನ್ನುಡಿಯಲ್ಲಿ ಕೆ. ಕಾಳೇಗೌಡ ಅವರು “ಸಾಹಿತ್ಯವೆಂದರೆ ತಾಯಿ, ತಾಯಿಗುಣವೆಂದರೆ ಎಲ್ಲಾ ಮಕ್ಕಳನ್ನೂ ಸಮಾನವಾಗಿ ಪ್ರೀತಿಸುವುದು. ಆದರೆ ದುರ್ಬಲ ಮಗುವಿಗೆ ಹೆಚ್ಚು ಕಾಳಜಿ ತೋರುವುದು ತಾಯಿ ಗುಣ. ಅಂಥ ಗುಣ ಸಾಹಿತ್ಯದದ್ದು. ಸಕಲೇಶಪುರದ ವಿಶ್ವಾಸ್ ಡಿ. ಗೌಡ ಅವರಲ್ಲೂ ಅದೇ ಗುಣವಿದೆ” ಎಂದು ಹೇಳಿದ್ದಾರೆ.
ಲೇಖಕರು ಪರಿಚಯಿಸಿದ ೪೦ ಕೃತಿಗಳ ಕುರಿತು ಓದಿದರೆ ಓದುಗರಲ್ಲಿ ಓದಿನಾಸಕ್ತಿ ಹೆಚ್ಚುತ್ತದೆ. “ಪುಸ್ತಕವನ್ನು ಓದಲು ಆರಂಭಿಸಿದರೆ ಕೆಳಗಿಡಲು ಮನಸ್ಸೇ ಬರುವುದಿಲ್ಲ, ಬದುಕಿನ ಭಾವನೆ-ಕಲ್ಪನೆಗಳಿಂದ ಹಿಡಿದು ಸಾವು-ನೋವು, ಸೋಲು-ಗೆಲುವುಗಳವರೆಗೆ ಅನಾವರಣಗೊಂಡಿದೆ” ಎಂದು ಡಾ. ಪ್ರದೀಪ್ ಕುಮಾರ್ ಹೆಬ್ರಿಯವರು ಅಭಿಪ್ರಾಯಪಟ್ಟಿದ್ದಾರೆ.
.










