ಚನ್ನರಾಯಪಟ್ಟಣ: ತಾಲೂಕಿನ ಮರುವನಹಳ್ಳಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ನೂತನವಾಗಿ ಪ್ರಾರಂಭಿಸಿರುವ ಸಾರ್ವಜನಿಕರ ಗ್ರಂಥಾಲಯಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿ, ಗ್ರಂಥಾಲಯ ಅಪಾರ ಜ್ಞಾನ ಸಂಪತ್ತು ತುಂಬಿರುವ ಭಂಡಾರ ಎಂದರು.
ಟಿವಿ ವೀಕ್ಷಣೆ ಹಾಗೂ ಮೊಬೈಲ್ ಬಳಕೆ ಮಿತವಾಗಿರಲಿ. ಆದರೆ ಪುಸ್ತಕ ಓದುವ ಹವ್ಯಾಸವನ್ನು ಮಾತ್ರ ಜೀವನದ ಒಂದು ಭಾಗವಾಗಿ ರೂಢಿಸಿಕೊಳ್ಳಬೇಕು. ಇದರಿಂದ ಜ್ಞಾನಾರ್ಜನೆ ಜೊತೆಗೆ ಸಮಾಜದ ಬದಲಾವಣೆಗೆ ದಾರಿದೀಪವಾಗಲಿದೆ ಎಂದು ತಿಳಿಸಿದರು.
ಗ್ರಂಥಾಲಯವು ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ದಿನವಿಡೀ ದುಡಿದು ದಣಿವಾರಿ ಬರುವ ರೈತರು ಸಹ ಸದುಪಯೋಗ ಪಡಿಸಿಕೊಳ್ಳಬೇಕು. ಒಂದಷ್ಟು ಸಮಯ ಗ್ರಂಥಾಲಯದಲ್ಲಿ ಕುಳಿತು ಕೃಷಿ ಹಾಗೂ ಇತರ ವಿಚಾರಗಳ ಬಗ್ಗೆ ಪುಸ್ತಕ ಓದಿ ತಿಳಿದುಕೊಳ್ಳಬಹುದು ಎಂದು ಸಲಹೆ ನೀಡಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ವಳಗೇರಹಳ್ಳಿ ಮಂಜೇಗೌಡ, ಗ್ರಾಮ ಪಂಚಾಯಿತಿ ಸದಸ್ಯ ಬಾಲರಾಜ್, ನುಗ್ಗೇಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಸಂಪತ್ ಕುಮಾರ್, ಪಿಡಿಒ ಶೋಭಾ, ಗ್ರಂಥಪಾಲಕಿ ಕವನ, ಗ್ರಾಮಸ್ಥರಾದ ಕೃಷ್ಣೇಗೌಡ, ಬೋರೇಗೌಡ, ಹಾಗೂ ಇತರರು ಇದ್ದರು.










