ಹಾಸನ: ಆಸ್ತಿ ದಾಖಲೆ ತಿರುಚಲಾಗಿದೆ: ಸರಿಪಡಿಸದಿದ್ದರೆ ಪ್ರತಿಭಟನೆ- ದಲಿತ ಸಂಘರ್ಷ ಸಮಿತಿ ಎಚ್ಚರಿಕೆ

Speaking at a press conference on Thursday, he said that the documents submitted to the Alur Town Panchayat are contrary to the actual situation. It is unfair to transfer the property to a third party without proper verification.

ಹಾಸನ: ಆಲೂರಿನ ನಿವಾಸಿಗಳಾದ ಮಲ್ಲಮ್ಮ ಕೋಂ ಸಣ್ಣಯ್ಯ ಎಂಬುವರಿಗೆ ಸೇರಿದ ಆಸ್ತಿ ದಾಖಲೆಯನ್ನು ಉದ್ದೇಶಪೂರ್ವಕವಾಗಿ ತಿರುಚಿ, ಕುಟುಂಬದ ನೈಜ ವಾರಸುದಾರರನ್ನು ಬಿಟ್ಟು ತಪ್ಪು ಮಾಹಿತಿ ಆಧಾರದ ಮೇಲೆ ಪೌತಿ ಖಾತೆ ಮಾಡಿಸಿದ್ದು, ಇದನ್ನು ಕೂಡಲೇ ಸರಿಪಡಿಸದಿದ್ದರೆ ಡಿಸಿ ಕಚೇರಿ ಮುಂದೆ ಪ್ರತಿಭಟಿಸುವುದಾಗಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಅರೇಹಳ್ಳಿ ನಿಂಗರಾಜು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಆಲೂರು ಪಟ್ಟಣ ಪಂಚಾಯಿತಿಯಲ್ಲಿ ಸಲ್ಲಿಸಿರುವ ದಾಖಲೆಗಳು ನಿಜ ಸ್ಥಿತಿಗೆ ವಿರುದ್ಧವಾಗಿದೆ. ಸೂಕ್ತ ಪರಿಶೀಲನೆ ಇಲ್ಲದೆ ಆಸ್ತಿಯನ್ನು ಮೂರನೇ ವ್ಯಕ್ತಿಗೆ ಖಾತೆ ಮಾಡಲು ಮುಂದಾಗಿರುವುದು ಅನ್ಯಾಯ. ತಪ್ಪು ಮಾಹಿತಿ ಆಧರಿಸಿ ಮಾಡಿದ ಪೌತಿ ಖಾತೆಯನ್ನು ತಕ್ಷಣ ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದರು.

ಮಲ್ಲಮ್ಮ ಅವರ ಹೆಸರಿನಲ್ಲಿ ಅಧಿಕೃತಿ ಖಾತೆ ತೆರೆಯಲ್ಪಟ್ಟಿತ್ತು. ಮಲ್ಲಮ್ಮ ಜೀವಂತವಾಗಿರುವಾಗಲೇ ತಮ್ಮ ಮೂವರು ಪುತ್ರರಾದ ಶಿವಶಂಕರ್, ಕಾಮಕ್ಷಯ್ಯ, ಮಂಜುನಾಥ ಇವರಿಗೆ ಆಸ್ತಿಯಲ್ಲಿ ಸಮಾನ ಹಕ್ಕು ಇರುವಂತೆ ದಾಖಲೆಗಳಲ್ಲಿ ಸ್ಪಷ್ಟವಾಗಿ ಗುರುತಿಸಿದ್ದರು.

ಶಿವಶಂಕರ್ ಅವರ ಮರಣದ ನಂತರ ವಂಶವೃಕ್ಷದಲ್ಲಿ ದುರುದ್ದೇಶದ ಬದಲಾವಣೆ ಆಗಿದೆ. ಮಲ್ಲಮ್ಮ ಅವರ ನಿಧನ ನಂತರ ಕುಟುಂಬದಲ್ಲಿ ವಂಶವೃಕ್ಷ ತಯಾರಿಸುವಾಗ ಸತ್ಯ ಮರೆಮಾಚಲಾಗಿದೆ ಎಂದು ದೂರಿದರು.

ಹಿರಿಯ ಪುತ್ರ ಶಿವಶಂಕರ್ ಅವರಿಗೆ ಎರಡು ಪತ್ನಿಯರಿದ್ದು, ಹಿರಿಯ ಪತ್ನಿ ವಿಮಲ, (ಮಗ ನಂದಕುಮಾರ್) ಎರಡನೇ ಪತ್ನಿ, ರಾಧಾ, (ಮಗಳು ಮಾನಸ) ಆದರೂ, ವಂಶವೃಕ್ಷ ತಯಾರಿಸುವಾಗ ವಿಮಲ ಅವರ ಹೆಸರನ್ನು ಕೈ ಬಿಡಲಾಗಿದೆ. ಅಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡಲಾಗಿದೆ.

ಈ ತಪ್ಪು ಮಾಹಿತಿ ಆಧಾರದ ಮೇಲೆ ಮುಂದಿನ ಪೀಳಿಗೆಯ ಹೆಸರಿನಲ್ಲಿ ಪೌತಿ ಖಾತೆ ಮಾಡಿಸಿಕೊಂಡು, ವಿಮಲ ಅವರಿಗೆ ಯಾವುದೇ ಮಾಹಿತಿ ನೀಡದೇ ಆಸ್ತಿ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ದೂರಿದರು.

ದಾಖಲೆ ತಿರುಚುವುದು, ವಾರಸುದಾರರ ಮರೆ ಮಾಚುವುದು, ತಪ್ಪು ಮಾಹಿತಿ ಆಧರಿಸಿ ಖಾತೆ ಬದಲಾವಣೆ ಮಾಡಿಸುವುದು ಕಾನೂನು ಬಾಹಿರ ಕೃತ್ಯಗಳಾಗಿವೆ. ಹೀಗಾಗಿ ಆಸ್ತಿ ಕ್ರಯ ಪಡೆದವರಿಗೆ ಹೊಸ ಖಾತೆ ಮಾಡಬಾರದು. ಮೂಲ ದಾಖಲೆಗಳನ್ನು ಪುನಃ ಪರಿಶೀಲಿಸಿ ನಿಜಸ್ಥಿತಿ ಬಹಿರಂಗಪಡಿಸಬೇಕು.

ಯಾರೂ ಮಾರಾಟ ಮಾಡಬಾರದು, ತಪ್ಪು ಮಾಹಿತಿ ಸಲ್ಲಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳದಿದ್ದರೆ ದೊಡ್ಡ ಮಟ್ಟದ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತ ವೆಂಕಟೇಶ್ ಬ್ಯಾಕರವಳ್ಳಿ, ಲಕ್ಷ್ಮೀ, ವಸಂತ್ ಕುಮಾರ್, ನೊಂದ ಮಹಿಳೆ ವಿಮಲ, ದ್ರಾಕ್ಷಾಹಿಣಿ ಇದ್ದರು.

Speaking at a press conference on Thursday, he said that the documents submitted to the Alur Town Panchayat are contrary to the actual situation. It is unfair to transfer the property to a third party without proper verification.