ಹಾಸನ: ಪ್ರತಿನಿತ್ಯ ಕುಟುಂಬಕ್ಕಾಗಿ ದುಡಿಯುವ ಮಹಿಳೆಯರು ತಮ್ಮ ಅಂತಃಶೋಧಕ್ಕಾಗಿ ಸ್ವಲ್ಪ ಸಮಯ ಮೀಸಲಿಡುವ ಅಗತ್ಯತೆ ಇದೆ ಎಂದು ಸಂಪ್ರದಾಯ ಫೌಂಡೇಶನ್‌ನ ಸಂಪನ್ಮೂಲ ವ್ಯಕ್ತಿ ಚೇತನ್ ಹೇಳಿದರು.
ನಗರದ ಸ್ಕಾಲರ್ಸ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ತಾಯಂದಿರಿಗಾಗಿ “ಸ್ಮೈಲ್ ಮದರ್” ಒಂದು ದಿನದ ವಿಶೇಷ ಕಾರ್ಯಾಗಾರದಲ್ಲಿ ಮಾತನಾಡಿ ಅವರು ಮಾತನಾಡಿದರು.
ಮಗುವಿನ ಸಂತೋಷಕ್ಕಾಗಿ ತನ್ನೆಲ್ಲಾ ನೋವುಗಳನ್ನು ಮರೆಮಾಚಿ, ಪ್ರೀತಿ, ಕರುಣೆ, ಸಹನೆ ಹಾಗೂ ಪ್ರೋತ್ಸಾಹದ ಪ್ರತೀಕವಾಗಿ ತಾಯಿ ತನ್ನ ಜವಾಬ್ದಾರಿ ನಿಭಾಯಿಸುತ್ತಾಳೆ. ಮಕ್ಕಳ ಮನೋವಿಜ್ಞಾನ, ಬೆಳವಣಿಗೆಯಲ್ಲಿ ತಂದೆ-ತಾಯಿಯರ ಪೋಷಕತ್ವದ ಪಾತ್ರ ಮಹತ್ವದ್ದಾಗಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಮಕ್ಕಳನ್ನು ಕಾಡುತ್ತಿರುವ ಅತಿಯಾದ ಮೊಬೈಲ್ ಗೀಳಿನಿಂದ ಉಂಟಾಗುವ ಸಮಸ್ಯೆಗಳು ಮತ್ತು ಅದರಿಂದ ಮಕ್ಕಳನ್ನು ದೂರವಿಡುವ ಮಾರ್ಗಗಳ ಬಗ್ಗೆ ಅವರು ವಿವರಿಸಿದರು.
ಶಾಲೆಯ ಆಡಳಿತಾಧಿಕಾರಿ ಡಾ. ಎಚ್.ಎನ್. ಚಂದ್ರಶೇಖರ್ ಮಾತನಾಡಿ, ‘ಅಮ್ಮ’ ಎಂದರೆ ಶಬ್ದಗಳಿಗೆ ನಿಲುಕದ, ಭಾವನೆಗಳನ್ನು ಮೀರಿದ ಒಂದು ಅನುಭವ. ಅಂತಹ ಮಹಾನ್ ತಾಯಂದಿರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಸಂತಸ ತಂದಿದೆ ಎಂದರು.
ಕಾರ್ಯದರ್ಶಿ ಮಮತಾ ಚಂದ್ರಶೇಖರ್, ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಪಾಲಕರು ಮತ್ತಿತರರಿದ್ದರು.










