ಗತವೈಭವ | ಕತೆ ಹೇಳುವ ಹೊಸ ಬಗೆ!

ಸಿಂಪಲ್‌ ಸುನಿ ನಿರ್ದೇಶನದ ಸಿನಿಮಾಗಳು ನಿರೂಪಣಾ ಶೈಲಿಯಿಂದ ಗಮನ ಸೆಳೆಯುತ್ತವೆ. ಅವರು ತಮ್ಮದೇ ಒಂದು ಸಿನಿಮಾ ಗ್ರಾಮರ್‌ ರೂಢಿಸಿಕೊಂಡಿದ್ದಾರೆ. ಸರಳ ಕತೆ, ತಿಳಿಹಾಸ್ಯದೊಂದಿಗೆ ತಮ್ಮದೇ ಆದ ನಿರೂಪಣಾ ಶೈಲಿಯಲ್ಲಿ ಪ್ರೇಕ್ಷಕರನ್ನು ಹಿಡಿದಿಡುವುದು ಅವರ ಶೈಲಿ. ಈ ಬಾರಿ ‘ಗತವೈಭವ’ ಸಿನಿಮಾದಲ್ಲೂ ಇದು ಮುಂದುವರೆದಿದೆ. ಚಿತ್ರದಲ್ಲಿ ಅವರು ಪುನರ್ಜನ್ಮದ ಕತೆ ಹೇಳುತ್ತಾರೆ. ಮೊದಲಾರ್ಧ ಕೊಂಚ ತಮಾಷೆಗೆ ಮೀಸಲಿಟ್ಟರೆ ದ್ವಿತಿಯಾರ್ಧವನ್ನು ಗಂಭೀರವಾಗಿಸಿದ್ದಾರೆ. ಇಲ್ಲಿ ಕತೆ ಹೇಳುವ ಹೊಸ ಬಗೆಯನ್ನು ಪರಿಚಯಿಸಿರುವುದು ವಿಶೇಷ.

ಪುರಾತನ ಮತ್ತು ಆಧುನಿಕ – ಇವು ಚಿತ್ರದ ನಾಯಕ, ನಾಯಕಿಯ ಹೆಸರುಗಳು. ಚಿತ್ರದ ಕತೆಗೂ, ಈ ಹೆಸರುಗಳಿಗೂ ಸಾಮ್ಯತೆಯಿದೆ. ಚಿತ್ರದ ಮೊದಲಾರ್ಧದಲ್ಲಿ ಸುನಿ ಪುರಾಣದ ಒಂದು ಕತೆ ಮತ್ತು 15ನೇ ಶತಮಾನದ ಪೋರ್ಚುಗೀಸರ ಒಂದು ಕತೆಯನ್ನು ಹೇಳುತ್ತಾರೆ. ಈ ಕಾಲಘಟ್ಟದ ಪ್ರಾಪರ್ಟಿ, ಕಾಸ್ಟ್ಯೂಮ್‌ನೊಂದಿಗಿನ ಎರಡು ಹಾಡುಗಳೂ ಇವೆ. ಪುರಾಣದ ಕತೆಯಲ್ಲಿ ಗ್ರೀನ್‌ ಮ್ಯಾಟ್‌ ಮತ್ತು CG ಯನ್ನು ಸೊಗಸಾಗಿ ಬಳಕೆ ಮಾಡಿದ್ದು, ಫ್ರೇಮ್‌ ಅಂದವಾಗಿ ಕಾಣುತ್ತದೆ. ಇಲ್ಲಿ ಸಮುದ್ರ ಮಥನದ ಸನ್ನಿವೇಶಕ್ಕೆ ಕೊಂಚ ಕತ್ತರಿ ಹಾಕಬಹುದಿತ್ತೇನೋ…

ದ್ವಿತಿಯಾರ್ಧ ತೆರೆದುಕೊಳ್ಳುತ್ತಿದ್ದಂತೆ ಕತೆ ಗಂಭೀರವಾಗುತ್ತದೆ. ಇಲ್ಲಿ ಸುನಿ ಅವರು ಮೊದಲಾರ್ಧದ ಕತೆಗೆ ಪೂರಕವಾದ ತಾರ್ಕಿಕ ಎಳೆಯನ್ನು ಕಟ್ಟುತ್ತಾ ಹೋಗಿದ್ದಾರೆ. ಪುನರ್ಜನ್ಮದ ಕತೆಗೆ ವಿಜ್ಞಾನವನ್ನೂ ಬೆರೆಸಿ ಪ್ರೇಕ್ಷಕರ ಅಲೋಚನೆಗೂ ಇಂಬು ನೀಡುತ್ತಾರೆ. ಕಥಾನಾಯಕ ದುಶ್ಯಂತ್‌ ಅವರಿಗೆ ಇದು ಮೊದಲ ಸಿನಿಮಾ. ಅವರು ಪಾತ್ರದ ಹದವರಿತು ನುರಿತ ಕಲಾವಿದನಂತೆ ಅಭಿನಯಿಸಿದ್ದಾರೆ. ನಾಯಕನಟಿ ಆಶಿಕಾ ರಂಗನಾಥ್‌ ಪಾತ್ರಕ್ಕೆ ಹೆಚ್ಚು ಸ್ಕೋಪ್‌ ಇದ್ದು, ಅವರು ಕೂಡ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ನಿಸ್ಸಂಶಯವಾಗಿ ಇದು ಅವರ ವೃತ್ತಿಬದುಕಿನ ಸುಂದರ ಸಿನಿಮಾ. ಹೊಸ ಪೀಳಿಗೆಯ ಸಿನಿಮಾ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ನಿರೂಪಿಸಿರುವ ಕಥನ ಶೈಲಿ ನಿಜಕ್ಕೂ ಕನ್ನಡಕ್ಕೆ ಹೊಸತು. ಈ ಮಟ್ಟಿಗೆ ನಿರ್ದೇಶಕ ಸುನಿ ಅವರ ಪ್ರಯತ್ನ ಶ್ಲಾಘನೀಯ. ಅವರಿಗೆ ಸಾಥ್‌ ನೀಡಿರುವ ಚಿತ್ರದ ತಂತ್ರಜ್ಞರಿಗೂ ಚಪ್ಪಾಳೆ ಸಲ್ಲಬೇಕು.