10.1 C
Munich
Home News ಹಾಸನ: 28ನೇ ರಾಜ್ಯಮಟ್ಟದ ಆದಿಚುಂಚನಗಿರಿ ಕ್ರೀಡಾಕೂಟ ಡಿ.3ರಿಂದ ಆರಂಭ

ಹಾಸನ: 28ನೇ ರಾಜ್ಯಮಟ್ಟದ ಆದಿಚುಂಚನಗಿರಿ ಕ್ರೀಡಾಕೂಟ ಡಿ.3ರಿಂದ ಆರಂಭ

Shri Shambhunath Swamiji said that the 28th state-level Adichunchanagiri Sports Meet will be held from the 3rd to the 5th of this month under the auspices of the Sri Adichunchanagiri Hassan-Kodagu Maths.

ಹಾಸನ: ಶ್ರೀ ಆದಿಚುಂಚನಗಿರಿ ಹಾಸನ-ಕೊಡಗು ಮಠಗಳ ಆಶ್ರಯದಲ್ಲಿ ಇದೇ ತಿಂಗಳ 3ರಿಂದ 5 ರ ವರೆಗೆ 28 ನೇ ರಾಜ್ಯಮಟ್ಟದ ಆದಿಚುಂಚನಗಿರಿ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಶಂಭುನಾಥ ಸ್ವಾಮೀಜಿ ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ ಅವರು, ಜಿಲ್ಲಾ ಕ್ರೀಡಾಂಗಣ ಒಳ ಮತ್ತು ಹೊರಗೆ ಕ್ರೀಡಾಕೂಟಗಳು ನಡೆಯಲಿವೆ. ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಡಾ. ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ ಎಂದರು.

ಒಟ್ಟಾರೆ ಸುಮಾರು 10 ಸಾವಿರ ಮಂದಿ ಭಾಗಿಯಾಗುವ ನಿರೀಕ್ಷೆ ಇದ್ದು, ಈ ಪೈಕಿ 5 ಸಾವಿರ ಮಂದಿ ಕ್ರೀಡಾಪಟುಗಳೇ ಇರಲಿದ್ದಾರೆ. ಮಕ್ಕಳು ಉಳಿದುಕೊಳ್ಳಲು 28 ಕಲ್ಯಾಣ ಮಂಟಪಗಳಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಕ್ರೀಡಾಕೂಟಕ್ಕಾಗಿ ಎಲ್ಲ ರೀತಿಯ ಸಿದ್ಧತೆ ಆಗಿದೆ ಎಂದ ಸ್ವಾಮೀಜಿ, ಈ ಹಿಂದೆ 13 ಕ್ರೀಡಾಕೂಟ ಹಾಸನದಲ್ಲೇ ನಡೆದಿತ್ತು. ಇದೀಗ 28ನೇ ಕ್ರೀಡಾಕೂಟದ ಆತಿಥ್ಯ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಪ್ರಾಥಮಿಕ, ಪ್ರೌಢ ಮತ್ತು ಕಾಲೇಜು ವಿಭಾಗಗಳಲ್ಲಿ 14, 17 ಮತ್ತು 19 ವರ್ಷ ಬಾಲಕ-ಬಾಲಿಕಿಯರು ಭಾಗಿಯಾಗಲಿದ್ದಾರೆ ಎಂದು ಹೇಳಿದರು. ಕ್ರೀಡಾಕೂಟ ಸಂದರ್ಭದಲ್ಲಿ ಶಾಖಾ ಮಠಗಳ ಮಠಾಧೀಶರು, ಎಲ್ಲ ಜನಪ್ರತಿನಿಧಿಗಳು ಹಾಜರಿರುವರು ಎಂದರು.

ಡಿ.4 ರಂದು ಬೆಳಗ್ಗೆ9 ಗಂಟೆಗೆ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಕ್ರೀಡಾಪಟುಗಳು ಮತ್ತು ಕ್ರೀಡಾಜ್ಯೋತಿಯೊಂದಿಗೆ ಕಲಾಭವನದಿಂದ ಸಾಲಗಾಮೆ ರಸ್ತೆ ಮೂಲಕ ಜಿಲ್ಲಾ ಕ್ರೀಡಾಂಗಣದರೆಗೆ ಸಾಗಲಿದೆ ಎಂದು ವಿವರಿಸಿದರು.

ಅದೇ ದಿನ ಸಂಜೆ 6 ಗಂಟೆಗೆ ನಗರದ ಶ್ರೀ ಆದಿಚುಂಚನಗಿರಿ ಆಂಗ್ಲಮಾಧ್ಯಮ ಶಾಲೆ ಆವರಣದಲ್ಲಿ ಬಿಜಿಎಸ್ ಸಂಭ್ರಮ ನಡೆಯಲಿದೆ. ಡಿ.5ರಂದು ಮಧ್ಯಾಹ್ನ 3 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಕ್ರೀಡಾಕೂಟಕ್ಕೆ ಅನೇಕರು ಸಹಕಾರ ನೀಡಿದ್ದು, ಅಂದು ಸ್ಮರಣ ಸಂಚಿಕೆ ಬಿಡುಗಡೆ ಆಗಲಿದೆ ಎಂದರು.

ಕ್ರೀಡಾಕೂಟದ ಅತಿಥಿಗಳಾಗಿ ವೇಗದ ಓಟಗಾರ್ತಿ, ರಾಷ್ಟ್ರೀಯಯ ಅಥ್ಲೆಟ್ ಪೂನಂ ಬೆಳ್ಳಿಯಪ್ಪ, ಹೈ ಜಂಪ್ ಸಾಧಕ ಹರ್ಷಿತ್ ಎಸ್, ಬಿಜಿಎಸ್ ಸಂಸ್ಥೆಯ ವಿದ್ಯಾರ್ಥಿನಿ, ವೇಗದ ಓಟದಲ್ಲಿ ಭಾರತ ಪ್ರತಿನಿಧಿಸಿರುವ ಇಂಚರಾ ಮೊದಲಾದವರು ಭಾಗಿಯಾಗಲಿದ್ದಾರೆ ಎಂದರು.

ನಮ್ಮ ಸಂಸ್ಥೆಯ ಮಕ್ಕಳು ಈಗಾಗಲೇ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಆ ಸಂಖ್ಯೆ ಮತ್ತಷ್ಟು ಹೆಚ್ಚಾಗಬೇಕು ಎಂಬ ಉದ್ದೇಶದಿಂದ ಈ ಕ್ರೀಡಾಕೂಟ ಆಯೋಜಿಸಲಾಗುತ್ತಿದೆ ಎಂದು ಸ್ವಾಮೀಜಿ ನುಡಿದರು.

ಈ ವೇಳೆ ಬಿಜಿಎಸ್ ಶಿಕ್ಷಣ ಟ್ರಸ್ಟ್ನ ಆಡಳಿತಾಧಿಕಾರಿ ಡಾ. ಎ.ಸಿ. ಶಿವರಾಂ ಇದ್ದರು. ಬಳಿಕ ಸ್ವಾಮೀಜಿ ಕ್ರೀಡಾಂಗಣದಲ್ಲಿ ಸಿದ್ಧತಾ ಕಾರ್ಯ ಪರಿಶೀಲಿಸಿದರು.

error: Content is protected !!