ಹಾಸನದಲ್ಲಿ ಥರ್ಮಲ್ ಡ್ರೋನ್ ಸ್ಕ್ವಾಡ್ ಉದ್ಘಾಟನೆ: ಆನೆ-ಮಾನವ ಸಂಘರ್ಷ ತಡೆಗೆ ತಂತ್ರಜ್ಞಾನದ ಬಳಕೆ

ಹಾಸನ: ಕರ್ನಾಟಕ ಸರ್ಕಾರದ ಅರಣ್ಯ ಸಚಿವರಾದ ಶ್ರೀ ಈಶ್ವರ ಬಿ ಖಂಡ್ರೆ ಅವರು ಇಂದು ಹಾಸನ ಜಿಲ್ಲೆಯಲ್ಲಿ ಆನೆ ಕಾರ್ಯಪಡೆಯ ಸಮಗ್ರ ತಂತ್ರಜ್ಞಾನ ಆಧಾರಿತ ಥರ್ಮಲ್ ಡ್ರೋನ್ ಸ್ಕ್ವಾಡ್‌ನ ಉದ್ಘಾಟನೆಯನ್ನು ನೆರವೇರಿಸಿದರು. ಈ ನವೀನ ಯೋಜನೆಯು ಆನೆ-ಮಾನವ ಸಂಘರ್ಷವನ್ನು ತಡೆಗಟ್ಟಲು ಮತ್ತು ಕಾಡಾನೆಗಳ ಚಲನವಲನಗಳನ್ನು ಪರಿಣಾಮಕಾರಿಯಾಗಿ ಗಮನಿಸಲು ತಂತ್ರಜ್ಞಾನದ ಶಕ್ತಿಯನ್ನು ಬಳಸಿಕೊಳ್ಳಲಿದೆ.

ಡ್ರೋನ್ ಸ್ಕ್ಯಾನ್ ನಿಂದ ಹೀಗೆ ಕಾಣಲಿವೆ ಆನೆಗಳು

ಈ ಥರ್ಮಲ್ ಡ್ರೋನ್ ಸ್ಕ್ವಾಡ್‌ನ್ನು ಆನೆ-ಮಾನವ ಸಂಘರ್ಷ ತೀವ್ರವಾಗಿರುವ ಪ್ರದೇಶಗಳಲ್ಲಿ ಬಳಸಲಾಗುವುದು. ಮುಂಜಾನೆ ಮತ್ತು ರಾತ್ರಿಯ ವೇಳೆಯಲ್ಲಿ ಕಾಡಾನೆಗಳ ಚಲನವಲನಗಳನ್ನು ಥರ್ಮಲ್ ಡ್ರೋನ್‌ಗಳ ಮೂಲಕ ಗಮನಿಸಿ, ತಕ್ಷಣವೇ ಸಾರ್ವಜನಿಕರಿಗೆ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಗೆ ಮಾಹಿತಿಯನ್ನು ರವಾನಿಸಲಾಗುತ್ತದೆ. ಈ ಡ್ರೋನ್ ಸ್ಕ್ವಾಡ್ ವಾಹನವು ಥರ್ಮಲ್ ಡ್ರೋನ್‌ನ ಜೊತೆಗೆ ಕಂಪ್ಯೂಟರ್ ಸಿಸ್ಟಮ್‌ನ್ನು ಒಳಗೊಂಡಿದ್ದು, ಕಾಡಾನೆಗಳ ಚಲನವಲನಗಳನ್ನು ವಾಹನದಲ್ಲಿಯೇ ಗಮನಿಸಿ, ತಕ್ಷಣದ ಮಾಹಿತಿಯನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ.

ಉದ್ಘಾಟನಾ ಕಾರ್ಯಕ್ರಮದಲ್ಲಿ ಹಾಸನದ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶ್ರೀ ಏಡುಕೊಂಡಲು, ಜಿಲ್ಲಾಧಿಕಾರಿಗಳಾದ ಶ್ರೀಮತಿ ಲತಾ ಕುಮಾರಿ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶ್ರೀ ಸೌರಭ್ ಕುಮಾರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶ್ರೀ ಮೋಹನ ವಿ. ಎಸ್ (ಹಾಸನ) ಮತ್ತು ಶ್ರೀ ಮಧುಸೂಧನ್ (ಸಕಲೇಶಪುರ) ಸೇರಿದಂತೆ ಹಾಸನ ಜಿಲ್ಲೆಯ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ಥರ್ಮಲ್ ಡ್ರೋನ್ ಸ್ಕ್ವಾಡ್ ಯೋಜನೆಯು ಆನೆ-ಮಾನವ ಸಂಘರ್ಷವನ್ನು ಕಡಿಮೆ ಮಾಡುವಲ್ಲಿ ಮತ್ತು ಸ್ಥಳೀಯ ಜನರ ಸುರಕ್ಷತೆಯನ್ನು ಖಾತ್ರಿಪಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.