Hassan: ಹಕ್ಕುಚ್ಯುತಿ ಮಂಡಿಸಿ ಅಧಿಕಾರಿಗಳಿಗೆ ಕಿರುಕುಳ: ಎಚ್.ಡಿ. ರೇವಣ್ಣ ವಿರುದ್ಧ ಶ್ರೇಯಸ್ ಪಟೇಲ್ ಕಿಡಿ

Hassan ಹಾಸನ | ಕನ್ನಡಪೋಸ್ಟ್ ವರದಿ

ಹಾಸನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದ ಶ್ರೇಯಸ್ ಎಂ. ಪಟೇಲ್ ಅವರು ಮಾಜಿ ಸಚಿವ ಎಚ್.ಡಿ. ರೇವಣ್ಣ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಹಕ್ಕುಚ್ಯುತಿ ಆರೋಪಗಳನ್ನು ಅಧಿಕಾರ ದುರುಪಯೋಗ ಎಂದು ಟೀಕಿಸಿದರು.

ಡಿಸಿ ಹಾಗೂ ತಾ.ಪಂ. ಇಓ ವಿರುದ್ಧ ಹಕ್ಕುಚ್ಯುತಿ ಆರೋಪ ಮಾಡಿರುವ ರೇವಣ್ಣ ಅವರ ನಡೆಗೆ ವಿರೋಧ ವ್ಯಕ್ತಪಡಿಸಿದ ಶ್ರೇಯಸ್ ಪಟೇಲ್, “ಹಿರಿಯ ಶಾಸಕರಾದ ಅವರು ನಮಗೆ ಮಾರ್ಗದರ್ಶನ ನೀಡಬೇಕಾದವರು. ಆದರೆ ಅವರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.


“ಪ್ರತಿ ಅಧಿವೇಶನದಲ್ಲೂ ಹಕ್ಕುಚ್ಯುತಿ”

“ಸುಖಾಸುಮ್ಮನೆ ಪ್ರತಿ ಅಧಿವೇಶನದಲ್ಲೂ ಸಿಕ್ಕಸಿಕ್ಕವರ ಮೇಲೆ ಹಕ್ಕುಚ್ಯುತಿ ಮಂಡನೆ ಮಾಡುತ್ತಿದ್ದಾರೆ. ಇದು ಅಧಿಕಾರಿಗಳಿಗೆ ಕಿರುಕುಳ ನೀಡುವ ಪ್ರಯತ್ನ” ಎಂದು ಅವರು ಆರೋಪಿಸಿದರು.

“ತಪ್ಪು ಮಾಡುವ ಅಧಿಕಾರಿಗಳಿಗೆ ತಿಳಿ ಹೇಳಲಿ. ಆದರೆ ಈ ರೀತಿಯ ನಡೆ ತಕ್ಕುದಲ್ಲ” ಎಂದು ಕಿಡಿಕಾರಿದರು.


“ಜಾತ್ರೆ ವಿವಾದ ರಾಜ್ಯ ಮಟ್ಟಕ್ಕೆ”

ಹೊಳೆನರಸೀಪುರದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಜಾತ್ರೆ ವಿವಾದಕ್ಕೆ ಪ್ರತಿಕ್ರಿಯಿಸಿದ ಅವರು,
“ಈ ವಿವಾದವನ್ನು ರಾಜ್ಯ ಮಟ್ಟಕ್ಕೆ ಕೊಂಡೊಯ್ದಿದ್ದು ಅವರೇ. ಅಧಿಕಾರಿಗಳಿಗೆ ತೊಂದರೆ ಕೊಡುವ ಪ್ರಯತ್ನ ಇದು” ಎಂದು ಹೇಳಿದರು.

“ಶ್ರೀ ಲಕ್ಷ್ಮೀನರಸಿಂಹ ಯಾರ ಮನೆಯ ಆಸ್ತಿಯಲ್ಲ”  ಇನ್ನಾದರೂ ಇಂತಹ ನಡವಳಿಕೆ ಬಿಡಲಿ ಎಂದರು.


“ಇದನ್ನ ಇಲ್ಲಿಗೆ ನಿಲ್ಲಿಸಲಿ”

“ಅವರು ತಮ್ಮ ನಡೆ ತಿದ್ದಿಕೊಳ್ಳಬೇಕು. ಇಲ್ಲವಾದರೆ ಮುಂದೆ ಜನರು ತೀರ್ಮಾನ ತೆಗೆದುಕೊಳ್ಳುತ್ತಾರೆ” ಎಂದು ಎಚ್ಚರಿಸಿದರು.


“ಡಿಸಿ ಉತ್ತಮವಾಗಿ ಕೆಲಸ‌ ಮಾಡ್ತಿದಾರೆ”

ಹಾಸನ ಜಿಲ್ಲಾಧಿಕಾರಿ ಕಾರ್ಯವೈಖರಿ ಶ್ಲಾಘಿಸಿದ ಅವರು,
“ಡಿಸಿ ಮಹಿಳೆ ಇದ್ದಾರೆ. ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಆರೋಪಗಳ ಸತ್ಯಾಸತ್ಯತೆ ತಿಳಿಯಲಿದೆ” ಎಂದು ಹೇಳಿದರು.


“ಜಾತ್ರೆ ಸಭೆಯಲ್ಲಿ ಗೊಂದಲ”

ಜಾತ್ರೆ ಸಂಬಂಧ ನಡೆದ ಮೊದಲ ಸಭೆಯಲ್ಲಿ ತೇರಿಗೆ ಹೊಸ ಬಟ್ಟೆ ಹಾಕುವ ತೀರ್ಮಾನವಾಗಿತ್ತು. ಬಳಿಕ ನಡೆದ ಎರಡನೇ ಸಭೆಯಲ್ಲಿ ಬದಲಾವಣೆ ಮಾಡಿರುವುದನ್ನು ಪ್ರಶ್ನಿಸಿದ ಶ್ರೇಯಸ್ ಪಟೇಲ್,
“ನಾನು ಗೌರವಧನದಿಂದ 2 ಲಕ್ಷ ನೀಡಿದ್ದೇನೆ. ಹೀಗಿದ್ದರೆ ತಮ್ಮ ಮನಸ್ಸಿಗೆ ಬಂದಂತೆ ತೀರ್ಮಾನ ಮಾಡಬಹುದೇ?” ಎಂದು ಪ್ರಶ್ನಿಸಿದರು.