ನವದೆಹಲಿ: ನವದೆಹಲಿಯ ಸಂಸತ್ ಭವನದಲ್ಲಿರುವ ಗ್ರಂಥಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹಾಸನ ಸಂಸದ Shreyas patel ಶ್ರೇಯಸ್ ಪಟೇಲ್ ಅವರು ದೇಶದ ಇತಿಹಾಸದಲ್ಲಿ ಸಂಸದರಾಗಿ ಸೇವೆ ಸಲ್ಲಿಸಿರುವ ಗಣ್ಯರ ಕುರಿತು ಸಂಗ್ರಹವಾಗಿರುವ ದಾಖಲೆಗಳನ್ನು ಅವಲೋಕಿಸಿದರು.
ಈ ವೇಳೆ 13ನೇ ಲೋಕಸಭಾ ಚುನಾವಣೆಯಲ್ಲಿ ಹಾಸನ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ತಮ್ಮ ತಾತ, ದಿವಂಗತ ಪುಟ್ಟಸ್ವಾಮಿಗೌಡ ಅವರ ಕುರಿತು ಗ್ರಂಥಾಲಯದಲ್ಲಿ ಸಂಗ್ರಹವಾಗಿರುವ ಮಾಹಿತಿಯನ್ನು ನೋಡಿದದ್ದು ಹೆಮ್ಮೆಯ ಕ್ಷಣವಾಗಿತ್ತು ಎಂದು ಸಂಸದರು ಸಾಮಾಜಿಕ ಜಾಲತಾಣದ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ಹೊಳೆನರಸೀಪುರದಂತಹ ಸಣ್ಣ ಪಟ್ಟಣದಿಂದ ರಾಜಕೀಯ ಪಯಣ ಆರಂಭಿಸಿದ ಪುಟ್ಟಸ್ವಾಮಿಗೌಡ ಅವರು ಜನಸೇವೆಯ ಮೂಲಕ ವಿಶಿಷ್ಟ ಗುರುತು ಮೂಡಿಸಿದ್ದರು. ಅವರು 1978ರಿಂದ 1984ರವರೆಗೆ ಶಾಸಕರಾಗಿ ಸೇವೆ ಸಲ್ಲಿಸಿ, ಬಳಿಕ ಹಲವು ಸಮಿತಿಗಳ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು.
ಇದೇ ವೇಳೆ 1999ರಲ್ಲಿ ಹಾಸನ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿಯೂ ಆಯ್ಕೆಯಾಗಿದ್ದು, ಜಿಲ್ಲೆಯ ಪರವಾಗಿ ಸಂಸತ್ತಿನಲ್ಲಿ ಪ್ರತಿನಿಧಿಸಿದ್ದರು. ಅದರ ಜೊತೆಗೆ 1989ರಿಂದ 1993ರವರೆಗೆ ಕರ್ನಾಟಕ ರಾಜ್ಯದಲ್ಲಿ ಲೋಕೋಪಯೋಗಿ ಸಚಿವರಾಗಿ ಕಾರ್ಯನಿರ್ವಹಿಸಿ ಅಭಿವೃದ್ಧಿ ಕಾರ್ಯಗಳಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.
ಜನರ ಶ್ರೇಯೋಭಿವೃದ್ಧಿಯೇ ತಮ್ಮ ತಾತನ ರಾಜಕೀಯದ ಪ್ರಮುಖ ಗುರಿಯಾಗಿತ್ತು ಎಂದು ಹೇಳಿರುವ ಶ್ರೇಯಸ್ ಪಟೇಲ್, ಅವರ ಸೇವಾ ಮನೋಭಾವ ಮತ್ತು ಅಭಿವೃದ್ಧಿಯ ದಾರಿ ತಮಗೆ ಪ್ರೇರಣೆಯಾಗಿದ್ದು, ಅದೇ ಮಾರ್ಗದಲ್ಲಿ ಜಿಲ್ಲೆಯ ಅಭಿವೃದ್ಧಿಗಾಗಿ ಇನ್ನಷ್ಟು ಶ್ರಮಿಸುವ ಸಂಕಲ್ಪ ಮಾಡಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.










