ಹಾಸನ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯಕ್ಕೆ ಸಂಬಂಧಿಸಿದಂತೆ ಶ್ರವಣಬೆಳಗೊಳ ಶಾಸಕ ಸಿ.ಎನ್.ಬಾಲಕೃಷ್ಣ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳದ ಬಗ್ಗೆ ಕೋಟ್ಯಂತರ ಜನರ ಭಕ್ತಿ, ನಂಬಿಕೆ ಮತ್ತು ಗೌರವವಿದೆ ಎಂದು ಅವರು ಹೇಳಿದ್ದಾರೆ. ಇತ್ತೀಚಿನ ಬೆಳವಣಿಗೆಗಳು ಹಿಂದೂ ಭಾವನೆಗಳಿಗೆ ಧಕ್ಕೆ ತರುತ್ತಿವೆ ಎಂದು ಆತಂಕ ವ್ಯಕ್ತಪಡಿಸಿರುವ ಶಾಸಕರು, ಎಸ್‌ಐಟಿ ತನಿಖೆ ವರದಿಯನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
ಎಸ್‌ಐಟಿ ತಂಡವು ದೂರಿನ ಆಧಾರದ ಮೇಲೆ ತನಿಖೆ ನಡೆಸುತ್ತಿದ್ದು, “ಈ ತನಿಖೆಯಿಂದ ಕೇವಲ ಚರ್ಚೆ ಉಂಟಾಗಬಾರದು, ಶೀಘ್ರವಾಗಿ ಮಾಹಿತಿ ನೀಡಬೇಕು. ಯಾವುದೇ ದುರುದ್ದೇಶದಿಂದ ತನಿಖೆ ನಡೆಯಬಾರದು,” ಎಂದು ಬಾಲಕೃಷ್ಣ ಒತ್ತಾಯಿಸಿದರು.
ಅವರು ಮಾತನಾಡುತ್ತಾ, ಪೂಜ್ಯ ವೀರೇಂದ್ರ ಹೆಗ್ಗಡೆಯವರ ಸಾರಥ್ಯದಲ್ಲಿ ಧರ್ಮಸ್ಥಳವು ಧಾರ್ಮಿಕ ಚಟುವಟಿಕೆಗಳು, ಗ್ರಾಮೀಣಾಭಿವೃದ್ಧಿ ಯೋಜನೆಗಳು, ಹೈನುಗಾರಿಕೆ, ರೈತಾಪಿ ವರ್ಗ ಮತ್ತು ಕೂಲಿಕಾರ್ಮಿಕರಿಗೆ ಸಹಾಯ ಮಾಡುವ ಮೂಲಕ ರಾಷ್ಟ್ರಕ್ಕೆ ಶಕ್ತಿ ತುಂಬಿದೆ ಎಂದು ಶ್ಲಾಘಿಸಿದ್ದಾರೆ. “ಧರ್ಮಸ್ಥಳಕ್ಕೆ ತನ್ನದೇ ಆದ ಗೌರವವಿದೆ, ಇದು ದೇಶ ಮತ್ತು ಪ್ರಪಂಚಕ್ಕೆ ಗೊತ್ತಿದೆ. ಇತ್ತೀಚಿನ ಗಲಾಟೆ ಮತ್ತು ಗದ್ದಲಗಳು ಭಕ್ತರ ಭಾವನೆಗಳಿಗೆ ಧಕ್ಕೆ ತರುತ್ತಿವೆ,” ಎಂದರು.
ಶಾಸಕ ಬಾಲಕೃಷ್ಣ ಅವರು ಎಸ್‌ಐಟಿಯಿಂದ ಶೀಘ್ರ ಮತ್ತು ಪಾರದರ್ಶಕ ವರದಿಯನ್ನು ಬಿಡುಗಡೆ ಮಾಡಿ, ಧರ್ಮಸ್ಥಳದ ಘನತೆಗೆ ಯಾವುದೇ ಧಕ್ಕೆಯಾಗದಂತೆ ಎಚ್ಚರ ವಹಿಸಬೇಕು ಎಂದರು.










