ಶಿವಮೊಗ್ಗ: ಸಿದ್ದಾಪುರ ವಸಂತ್ ನಾಯ್ಕ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಜ್ಯೋತಿಷಿ ಕಮಲಾಕರ್ ಭಟ್‌ನ ಆರ್ಥಿಕ ಹಿನ್ನೆಲೆ ಮತ್ತು ಆಸ್ತಿ ವಿವರಗಳು ಒಂದೊಂದಾಗಿ ಬಹಿರಂಗವಾಗುತ್ತಿದ್ದು, ತನಿಖಾಧಿಕಾರಿಗಳನ್ನೇ ಅಚ್ಚರಿ ಮೂಡಿಸುತ್ತಿವೆ. ‘ಆಧ್ಯಾತ್ಮಿಕತೆ’ಯ ಮುಖವಾಡದ ಹಿಂದೆ ನಡೆಯುತ್ತಿದ್ದ ಬೃಹತ್ ಬಿಸಿನೆಸ್ ಮತ್ತು ಕೋಟ್ಯಂತರ ಮೌಲ್ಯದ ಆಸ್ತಿ ವಿವರಗಳು ಇದೀಗ ಬೆಳಕಿಗೆ ಬಂದಿವೆ.
ಮುದುವಾಲದಲ್ಲಿ ಕೋಟಿ ಬೆಲೆಬಾಳುವ ಭೂಸ್ವಾಮ್ಯ
ಸ್ಥಳೀಯ ಮೂಲಗಳ ಮಾಹಿತಿ ಪ್ರಕಾರ, ಶಿವಮೊಗ್ಗ ತಾಲ್ಲೂಕಿನ ಮುದುವಾಲ ಗ್ರಾಮದಲ್ಲಿ ಕಮಲಾಕರ್ ಭಟ್ ಸುಮಾರು 10 ಎಕರೆ ಜಮೀನಿನ ಮಾಲೀಕ. ಐದು ವರ್ಷಗಳ ಹಿಂದೆ ಈ ಜಮೀನನ್ನು ಸುಮಾರು 3.5 ಕೋಟಿ ರೂ. ವೆಚ್ಚದಲ್ಲಿ ಖರೀದಿಸಿದ್ದ ಎನ್ನಲಾಗಿದ್ದು, ಇಂದಿನ ಮಾರುಕಟ್ಟೆ ಮೌಲ್ಯ ಸುಮಾರು 6 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ಗೋಶಾಲೆ–ಮಠದ ಹೆಸರಲ್ಲಿ ಜಮೀನು ಖರೀದಿ
ಜಮೀನು ಖರೀದಿಸುವ ವೇಳೆ ಗೋಶಾಲೆ, ಮಠ ಹಾಗೂ ದೇವಸ್ಥಾನ ನಿರ್ಮಿಸುವ ಉದ್ದೇಶವಿದೆ ಎಂದು ಹೇಳಿಕೊಂಡು ಸ್ಥಳೀಯರ ನಂಬಿಕೆ ಗಳಿಸಲು ಕಮಲಾಕರ್ ಭಟ್ ಮುಂದಾಗಿದ್ದ. ಈ ನಿಟ್ಟಿನಲ್ಲಿ ಆರಂಭದಲ್ಲಿ ಗೋಶಾಲೆಯನ್ನು ಕೂಡ ಸ್ಥಾಪಿಸಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಕೆಲ ತಿಂಗಳಲ್ಲಿ ಗೋಶಾಲೆ ಬಂದ್ ಆದರೆ ಗೋಶಾಲೆ ಎಂಬ ಹೆಸರಿನಲ್ಲಿ ಆರಂಭಗೊಂಡ ಚಟುವಟಿಕೆಗಳು ಕೆಲವೇ ತಿಂಗಳಲ್ಲಿ ಸಂಪೂರ್ಣ ಸ್ಥಗಿತಗೊಂಡಿವೆ ಎನ್ನಲಾಗಿದೆ. ಗೋಶಾಲೆ ಬಂದ್ ಆದ ಬಳಿಕ, ಆ ಜಾಗವನ್ನು ಹೋಮ-ಹವನ, ಪೂಜೆ-ಪುನಸ್ಕಾರ ಮತ್ತು ಜ್ಯೋತಿಷ್ಯ ಸಂಬಂಧಿತ ಕಾರ್ಯಕ್ರಮಗಳಿಗೆ ಮಾತ್ರ ಬಳಸಿಕೊಳ್ಳಲಾಗುತ್ತಿತ್ತು ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಈ ಎಲ್ಲ ಬೆಳವಣಿಗೆಗಳು, ಕಮಲಾಕರ್ ಭಟ್‌ನ ಆರ್ಥಿಕ ಮೂಲಗಳು ಹಾಗೂ ಆಸ್ತಿಗಳ ಕುರಿತು ತನಿಖೆಗೆ ಹೊಸ ಆಯಾಮ ನೀಡಿದ್ದು, ಪ್ರಕರಣ ಮತ್ತಷ್ಟು ಗಂಭೀರ ತಿರುವು ಪಡೆಯುವ ಸಾಧ್ಯತೆ ಇದೆ.










