ಬೆಂಗಳೂರು : ಎವಿಆರ್ ಗ್ರೂಪ್ ಮಾಲೀಕ ಅರವಿಂದ ರೆಡ್ಡಿ ಕಳೆದ ಕೆಲವು ತಿಂಗಳಿಂದ ನಟಿಯೊಂದಿಗಿನ ವಿವಾದದ ಕಾರಣ ಭಾರೀ ಸುದ್ದಿಯಲ್ಲಿದ್ದಾರೆ. ಮೋಸ, ವಂಚನೆ, ಅನ್ಯಾಯ ಹಾಗೂ ಬೆದರಿಕೆ ಆರೋಪಿಸಿ ಅರವಿಂದ ರೆಡ್ಡಿ ಕಾನೂನು ಹೋರಾಟಕ್ಕೆ ಇಳಿದಿದ್ದರೆ, ಮತ್ತೊಂದೆಡೆ ನಟಿ ತನಗೆ ರೆಡ್ಡಿಯಿಂದ ಕಿರುಕುಳವಾಗಿದೆ ಎಂದು ದೂರು ದಾಖಲಿಸಿದ್ದರು. ಈ ಪರಸ್ಪರ ಆರೋಪ–ಪ್ರತ್ಯಾರೋಪಗಳು ರಾಜ್ಯದಾದ್ಯಂತ ಚರ್ಚೆಗೆ ಕಾರಣವಾಗಿದ್ದವು.
ಈ ಮಧ್ಯೆ ಅರವಿಂದ ರೆಡ್ಡಿಗೆ ಜೀವಬೆದರಿಕೆ ಪತ್ರವೊಂದು ಬಂದಿದ್ದು, ಈ ಕುರಿತು ಅವರು ಹೆಚ್ಎಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು, ರೆಡ್ಡಿ ವಿರುದ್ಧ ಕಿರುಕುಳ ದೂರು ನೀಡಿದ್ದ ನಟಿಯ ಗೆಳೆಯನನ್ನೇ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ವೈಶಾಖ್ ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ವೈಶಾಖ್ ಅರವಿಂದ ರೆಡ್ಡಿಗೆ ಬೆದರಿಕೆ ಪತ್ರ ಕಳುಹಿಸಿ, ನಟಿಯೊಂದಿಗಿನ ವಿವಾದ ಬಗೆಹರಿಸುವಂತೆ ಹಾಗೂ ತನ್ನ ಗ್ಯಾರೇಜ್ಗೆ 6 ರಿಂದ 7 ಕೋಟಿ ರೂ. ಹಣ ಕಳುಹಿಸುವಂತೆ ಬೇಡಿಕೆ ಇಟ್ಟಿದ್ದ. ಇಲ್ಲವಾದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಪತ್ರದಲ್ಲಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ಬೆದರಿಕೆ ಪತ್ರದ ಸುಳಿವು ಹತ್ತಿದ ಪೊಲೀಸರು, ಬನಶಂಕರಿ ಪ್ರದೇಶದ ಬ್ಲೂ ಡಾರ್ಟ್ ಕೊರಿಯರ್ ಮೂಲಕ ಪತ್ರ ಕಳುಹಿಸಿರುವುದು ಪತ್ತೆಹಚ್ಚಿದ್ದಾರೆ. ಪೊಲೀಸರ ದಿಕ್ಕು ತಪ್ಪಿಸಲು ಬೇರೆ ಸ್ಥಳದಿಂದ ಕೊರಿಯರ್ ಮಾಡಲಾಗಿತ್ತು. ತನಿಖೆ ವೇಳೆ ಮೊದಲು ಗ್ಯಾರೇಜ್ನಲ್ಲಿ ಕೆಲಸ ಮಾಡುತ್ತಿದ್ದ ಬಾಲಕನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಬಾಸ್ ಹೇಳಿದಂತೆ ಕೊರಿಯರ್ ಮಾಡಿದ್ದೇನೆ ಎಂದು ಬಾಲಕ ಬಾಯ್ಬಿಟ್ಟಿದ್ದಾನೆ. ಬಳಿಕ ‘ಬಾಸ್ ಯಾರು?’ ಎನ್ನುವ ಸುಳಿವಿನ ಮೇಲೆ ತನಿಖೆ ನಡೆಸಿದ ಪೊಲೀಸರು, ನಟಿಯ ಗೆಳೆಯ ವೈಶಾಖನೇ ಪತ್ರ ಕಳಿಸಿದ್ದಾನೆ ಎಂಬುದನ್ನು ಖಚಿತಪಡಿಸಿಕೊಂಡು ಬಂಧಿಸಿದ್ದಾರೆ.
ಇನ್ನೂ ಆರೋಪಿ ವೈಶಾಖ್, ನಟಿಯ ಮನೆಯಲ್ಲೇ ತನ್ನ ಮೊಬೈಲ್ ಫೋನ್ನ್ನು ಅಡಗಿಸಿದ್ದಾನೆ ಎನ್ನಲಾಗುತ್ತಿದ್ದು, ಆ ಮೊಬೈಲ್ ಪತ್ತೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಇದೇ ವೇಳೆ ಬಿಗ್ಬಾಸ್ ಮಾಜಿ ಸ್ಪರ್ಧಿಯಾಗಿರುವ ನಟಿಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ಒಟ್ಟಾರೆ, ಅರವಿಂದ ರೆಡ್ಡಿ ವಿರುದ್ಧ ಧೈರ್ಯವಾಗಿ ಕಾನೂನು ಹೋರಾಟ ಆರಂಭಿಸಿದ್ದ ನಟಿ, ತನ್ನ ಗೆಳೆಯನ ಮೂಲಕವೇ ಬ್ಲಾಕ್ಮೇಲ್ಗೆ ಯತ್ನಿಸಿದ್ದಳಾ ಎಂಬ ಅನುಮಾನ ಇದೀಗ ಗಟ್ಟಿಯಾಗುತ್ತಿದೆ.










