ಅರಸೀಕೆರೆ: ತಾಲ್ಲೂಕಿನಲ್ಲಿ ದೇವಾಲಯಗಳ ಸರಣಿ ಕಳ್ಳತನ ಪ್ರಕರಣಗಳು ಮುಂದುವರಿದಿದ್ದು, ಗುರುವಾರ ರಾತ್ರಿ ಕಣಕಟ್ಟೆ ಹೋಬಳಿಯ ಬೊಮ್ಮಸಮುದ್ರ ಗ್ರಾಮದ ಹೊರವಲಯದಲ್ಲಿರುವ ಬೊಮ್ಮಲಿಂಗೇಶ್ವರ ಸ್ವಾಮಿ ದೇವಾಲಯದಲ್ಲಿ ಕಳ್ಳತನ ನಡೆದಿದೆ.
ಗ್ರಾಮದ ಹೊರವಲಯದ ಕೆರೆ ಏರಿಯ ಮೇಲಿರುವ ಈ ದೇವಾಲಯದಲ್ಲಿ ಎಂದಿನಂತೆ ಸಂಜೆ ಅರ್ಚಕರು ಪೂಜೆ ಮುಗಿಸಿ ಮನೆಗೆ ತೆರಳಿದ್ದರು. ಆದರೆ ಶುಕ್ರವಾರ ಮುಂಜಾನೆ ಪೂಜೆಗೆ ಬಂದಾಗ ದೇವಾಲಯದ ಮುಖ್ಯ ಬಾಗಿಲಿನ ಬೀಗ ಒಡೆದು ಕಳ್ಳರು ಒಳನುಗ್ಗಿರುವುದು ಬೆಳಕಿಗೆ ಬಂದಿದೆ.
ಖದೀಮರು ದೇವಾಲಯ ಆವರಣದಲ್ಲಿ ಇದ್ದ ಹುಂಡಿಯ ಬೀಗ ಒಡೆದು ಅದರಲ್ಲಿದ್ದ ನಗದು ಹಣವನ್ನು ದೋಚಿದ್ದಾರೆ. ಅಲ್ಲದೇ, ಗರ್ಭಗುಡಿಯಲ್ಲಿದ್ದ ಬೊಮ್ಮಲಿಂಗೇಶ್ವರ ಸ್ವಾಮಿಗೆ ಧರಿಸಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳ್ಳಿ ಆಭರಣಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಬಾಣಾವರ ಠಾಣೆಯಲ್ಲಿ ದೂರು ನೀಡಲಾಗಿದೆ ಎಂದು ದೇವಾಲಯ ಅಭಿವೃದ್ಧಿ ಸಮಿತಿ ಮಾಹಿತಿ ನೀಡಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಆರಂಭಿಸಿದ್ದಾರೆ.
ತಾಲೂಕಿನಲ್ಲಿ ಇತ್ತೀಚೆಗೆ ದೇವಾಲಯಗಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಸರಣಿ ಕಳ್ಳತನ ಪ್ರಕರಣಗಳು ಭಕ್ತರಲ್ಲಿ ಆತಂಕವನ್ನುಂಟು ಮಾಡಿವೆ. ಆರೋಪಿಗಳನ್ನು ಶೀಘ್ರ ಪತ್ತೆಹಚ್ಚುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
series of temple thefts continues in Arasikere taluk, with a theft taking place at the Bommalingeshwara Swamy Temple on the outskirts of Bommasamudra village in Kanakatte hobli on Thursday night.










