ಸಕಲೇಶಪುರ: ಮಲೆನಾಡು ಭಾಗದಲ್ಲಿ ಹೆಚ್ಚುತ್ತಿರುವ ಕಾಫಿ ಫಸಲು ಕಳವಿನ ಪ್ರಕರಣಗಳಿಂದ ಪೊಲೀಸ್ ಇಲಾಖೆ ಎಚ್ಚೆತ್ತಿದ್ದು, ಶುಕ್ರವಾರ ಪಟ್ಟಣದ ಡಿವೈಎಸ್ಪಿ ಕಚೇರಿಯಲ್ಲಿ ಕಾಫಿ, ಕಾಳು ಮೆಣಸು ವರ್ತಕರ ಸಭೆ ನಡೆಸಿದೆ.
ಇತ್ತೀಚಿನ ದಿನಗಳಲ್ಲಿ ಕಾಫಿ ಬೆಲೆಯಲ್ಲಿ ಏರಿಕೆ ಆಗಿರುವುದರಿಂದ ಕಾಫಿ ಕಳ್ಳತನ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ಈ ಅಪರಾಧ ಕೃತ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಬೆಳೆಗಾರರು ಹಾಗೂ ವರ್ತಕರು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಎಂದು ಸಕಲೇಶಪುರ ಡಿವೈಎಸ್ಪಿ ಎಸ್.ಕೆ. ಮಾಲತೀಶ ಹೇಳಿದರು.
ವರ್ತಕರು ಕಾಫಿ,ಏಲಕ್ಕಿ,ಮೆಣಸು ಮಾರಾಟ ಮಾಡಲು ಬರುವವರ ಬಳಿ ಜಮೀನಿನ ಆರ್‌ಟಿಸಿ ಪಡೆದುಕೊಳ್ಳಬೇಕು. ಹಾಗೂ ತಮ್ಮ ಅಂಗಡಿಗಳಲ್ಲಿ ಅಂಗಡಿಯ ಒಳಾಂಗಣ ಮತ್ತು ಅಂಗಡಿ ಮುಂಭಾಗ
ಹಾದುಹೋಗಿರುವ ರಸ್ತೆಯ ದೃಶ್ಯಗಳು ಕಾಣುವ ಹಾಗೆ ಸಿಸಿಟಿವಿ ಕ್ಯಾಮರಾ ಅಳವಡಿಸಬೇಕು. ಕನಿಷ್ಠ 3 ತಿಂಗಳ ಫೂಟೇಜ್ ಬ್ಯಾಕಪ್ ಇಟ್ಟುಕೊಳ್ಳುಬೇಕು ಮತ್ತು ಅಂಗಡಿಗಳಲ್ಲಿ ಒಂದು ರಿಜಿಸ್ಟರ್ ಇಟ್ಟು ಅದರಲ್ಲಿ ಪ್ರತಿ ದಿನ ಅವರ ಬಳಿಗೆ ಕಾಫಿ,ಏಲಕ್ಕಿ,ಮೆಣಸು ಮಾರಾಟ ಮಾಡಲು ಬರುವವರ ವಿಳಾಸ,ಮೊಬೈಲ್ ನಂಬರ್ ಹಾಗೂ ಅವರಿಂದ ಖರೀದಿಸಿದ ಉತ್ಪನ್ನದ ವಿವರವನ್ನು ನಮೂದು ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ಅನುಮಾನಾಸ್ಪದ ವ್ಯಕ್ತಿಗಳು ಕಾಫಿ,ಏಲಕ್ಕಿ,ಮೆಣಸು ಮಾರಲು ಬಂದಾಗ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡಬೇಕು. ವರ್ತಕರು ಹಾಗೂ ಬೆಳೆಗಾರರು ಮುಂಜಾಗ್ರತಾಕ್ರಮವನ್ನು ವಹಿಸುವ ಮೂಲಕ ಕಳ್ಳತನ ಕಡಿಮೆ ಮಾಡಬಹುದು.ಇದಕ್ಕೆ ತಮ್ಮೆಲ್ಲರ ಸಹಕಾರ ಅತಿ ಮುಖ್ಯ ಎಂದು ಸಹಕಾರ ಕೋರಿದರು.
ರಾತ್ರಿ ಗಸ್ತಿನ ವೇಳೆ ಅನುಮಾನಸ್ಪದವಾಗಿ ಓಡಾಡುವ ಮಾರುತಿ 800 ಕಾರು, ಓಮ್ನಿ ವ್ಯಾನ್. ಗೂಡ್ಸ್ ಆಟೋಗಳನ್ನು ಕಡ್ಡಾಯವಾಗಿ ತಪಾಸಣೆ ಮಾಡುವಂತೆ ಬೀಟ್ ಸಿಬ್ಬಂದಿ ಮತ್ತು ರಾತ್ರಿ ಗಸ್ತಿನ ಅಧಿಕಾರಿಗಳಿಗೆ ಸೂಚಿಸಿದರು.
ನಗರ ಠಾಣೆ ಇನ್ಸೆಕ್ಟರ್ ವನರಾಜ್, ಗ್ರಾಮಾಂತರ ಪೊಲೀಸ್ ಠಾಣೆ ಸಬ್ ಇನ್ಸೆಕ್ಟರ್ ಪ್ರಸನ್ನ ಕುಮಾರ್,
ಯಸಳೂರು ಠಾಣೆ ಪಿ.ಎಸ್.ಐ ಸಲ್ಮಾನ್ ಖಾನ್ ತಂಬುಳ್ಳಿ, ಕಾಫಿ ವರ್ತಕರು ಹಾಗೂ ಪೊಲೀಸ್ ಸಿಬ್ಬಂದಿ ಹಾಜರಿದ್ದರು.
Sakleshpur: The police department, alarmed by the increasing cases of coffee crop theft in the Malnad region, held a meeting of coffee and pepper traders at the town’s DySP office on Friday.










