ಚನ್ನರಾಯಪಟ್ಟಣ: ಗ್ರಾಮ ಪಂಚಾಯಿತಿಯು ಅಭಿವೃದ್ಧಿಯ ಸಂಪರ್ಕ ಸೇತುವೆ

ಚನ್ನರಾಯಪಟ್ಟಣ: ತಾಲ್ಲೂಕಿನ ನುಗ್ಗೇಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಎನ್.ಆರ್.ನಟರಾಜ್ ಅವರು ಶುಕ್ರವಾರ ಅವಿರೋಧವಾಗಿ ಆಯ್ಕೆಯಾದರು. ನೂತನ ಅಧ್ಯಕ್ಷ ಎನ್.ಆರ್.ನಟರಾಜ್ ಅವರನ್ನು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕುಸುಮ ಬಾಲಕೃಷ್ಣ ಅಭಿನಂದಿಸಿ ಮಾತನಾಡಿ, ಪಕ್ಷ ಬೇಧ ಮರೆತು ಪಾರದರ್ಶಕವಾಗಿ ಕೆಲಸ ಮಾಡುವ ಮೂಲಕ ಜನಸೇವೆ ಮಾಡುವುದು ಅಗತ್ಯ ಎಂದು ಹೇಳಿದರು.

ಗ್ರಾಮ ಪಂಚಾಯಿತಿಯು ಸರ್ಕಾರ ಹಾಗೂ ಸಾರ್ವಜನಿಕರ ನಡುವೆ ಸಂಪರ್ಕ ಸೇತುವೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಗ್ರಾಮೀಣ ಭಾಗದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ಕೇಂದ್ರವಾಗಿದೆ. ಗ್ರಾಪಂ ಯೋಜನೆಗಳನ್ನು ಸದ್ಬಳಿಕೆ ಮಾಡಿಕೊಂಡು ಕೆಲಸ ಮಾಡುವುದು ಪ್ರತಿಯೊಬ್ಬ ಸದಸ್ಯರ ಕರ್ತವ್ಯ ಎಂದು ತಿಳಿಸಿದರು.

ಗ್ರಾಮದ ಅಭಿವೃದ್ಧಿ ಸಲುವಾಗಿ ಚುನಾವಣೆ ವೇಳೆ ಜನತೆ ನಿಮ್ಮನ್ನು ಆಯ್ಕೆ ಮಾಡಿರುತ್ತಾರೆ. ಅವರ ನಂಬಿಕೆಗೆ ಅರ್ಹರಾಗಿ ಕೆಲಸ ಮಾಡಬೇಕು. ಅಗತ್ಯ ಮೂಲ ಸೌಲಭ್ಯಗಳಾದ ಕುಡಿಯುವ ನೀರು, ಸೂಕ್ತ ರಸ್ತೆ ಹಾಗೂ ಚರಂಡಿ ನಿರ್ಮಾಣ, ಬೀದಿ ದೀಪಗಳ ನಿರ್ವಹಣೆ ಹಾಗೂ ಇತರೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು. ಗ್ರಾಮೀಣ ಪ್ರದೇಶ ಅಭಿವೃದ್ಧಿ ಹೊಂದಿದರೆ ಮಾತ್ರ ದೇಶ ಪ್ರಗತಿ ಕಾಣಲು ಸಾಧ್ಯವಾಗಲಿದೆ ಎಂದು ಸಲಹೆ ನೀಡಿದರು.

ನೂತನ ಅಧ್ಯಕ್ಷ ಎನ್.ಆರ್.ನಟರಾಜ್ ಮಾತನಾಡಿ, ಶಾಸಕರಾದ ಸಿ.ಎನ್.ಬಾಲಕೃಷ್ಣ ಅವರ ಮಾರ್ಗದರ್ಶನದಲ್ಲಿ ಸರ್ವ ಸದಸ್ಯರ ವಿಶ್ವಾಸ ಹಾಗೂ ಸಲಹೆ ಪಡೆದು ವ್ಯಾಪ್ತಿಯ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.

ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದ ಎನ್.ಆರ್.ನಟರಾಜ್ ಅವರನ್ನು ವಿವಿಧ ಕ್ಷೇತ್ರದ ಗಣ್ಯರು, ಮುಖಂಡರು ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ಅಭಿನಂದಿಸಲಾಯಿತು. ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು. ನುಗ್ಗೇಹಳ್ಳಿ ಪುರವರ್ಗ ಹಿರೇಮಠದ ಶ್ರೀ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಆಶೀರ್ವದಿಸಿದರು.

ಟಿಎಪಿಸಿಎಂಎಸ್ ನಿರ್ದೇಶಕ ತೋಟಿ ನಾಗರಾಜ್, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಆರ್.ದೊರೆಸ್ವಾಮಿ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಿಕ್ಟರ್, ಮಾಜಿ ಅಧ್ಯಕ್ಷ ಸಂಪತ್ ಕುಮಾರ್, ತಾಪಂ ಮಾಜಿ ಸದಸ್ಯ ಬೆಳಗಿಹಳ್ಳಿ ಪುಟ್ಟಸ್ವಾಮಿ, ಜಿಪಂ ಮಾಜಿ ಉಪಾಧ್ಯಕ್ಷ ನಟರಾಜ್, ಪ್ರಮುಖರಾದ ಜಾವಿದ್, ಗೋಪಾಲ್, ಗುಂಡಣ್ಣ, ಪಟೇಲ್ ಮುನ್ನ, ಹೊನ್ನೇಗೌಡ, ಶಿವಕುಮಾರ್, ವಿಠಲ್, ಪ್ರಕಾಶ್, ಕೆಂಪೇಗೌಡ, ದೊಡ್ಡಗನ್ನಿ ಸತೀಶ್, ಹೋಟೆಲ್ ರಾಜಣ್ಣ, ಗಿರೀಶ್ ಹಾಗೂ ಇತರರು ಇದ್ದರು.