ಪ್ರತಿಭಾ ಪುರಸ್ಕಾರವು ಶಾಲಾ ಫಲಿತಾಂಶದ ಗುಣಮಟ್ಟವನ್ನು ಹೆಚ್ಚಿಸುತ್ತದೆ : ಜೆ.ಬಿ. ತಮ್ಮಣ್ಣ ಗೌಡ

ಹಾಸನ : ದೇಶಪ್ರೇಮ ಮತ್ತು ರಾಷ್ಟ್ರೀಯ ಭಾವೈಕ್ಯತೆ ಎಂಬುದು ಆಗಸ್ಟ್ ಮಾಹೆಗೆ ಮಾತ್ರ ಸೀಮಿತವಾಗದೆ ನಿತ್ಯ ನಿರಂತರವಾಗಿರಬೇಕು. ನನ್ನದು ದೇಶ, ನನ್ನದು ನಾಡು, ನನ್ನದು ಶಾಲೆ ಎನ್ನದವರ ಎದೆ ಸುಡುಗಾಡು. ಆದ್ದರಿಂದ ನಾವು ಭಾರತೀಯರು ನಾವೆಲ್ಲರೂ ಒಂದೇ ಎಂಬ ಭಾವನೆಯ ಮೂಲಕ ದೇಶಾಭಿಮಾನ ಮೂಡಿಸುವ ಕೆಲಸವಾಗಬೇಕು ಎಂದು ನಿವೃತ್ತ ಶಿಕ್ಷಣಾಧಿಕಾರಿ ಜೆ.ಬಿ.ತಮ್ಮಣ್ಣಗೌಡ ಹೇಳಿದರು.

ನಗರದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಂದಲಿ ಇಲ್ಲಿ ಹಮ್ಮಿಕೊಂಡಿದ್ದ 79ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಮಾತನಾಡುತ್ತಾ ಇರು ಕಲಿಯುಗ ಅಂದರೆ ಕಲಿಯುವ ಯುಗವಾಗಿದೆ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಕಲಿಕೆಯ ಮತ್ತು ಜ್ಞಾನದ ಆಧಾರದ ಮೇಲೆ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳಬೇಕಿದೆ. ಹಾಗಾಗಿ ಕಲಿಸುವವರು ಪರಿಣಾಮಕಾರಿಯಾಗಿ ಕಲಿಸಬೇಕು ಹಾಗೆಯೇ ಕಲಿಯುವವರು ಪರಿಣಾಮಕಾರಿಯಾಗಿ ಕಲಿಯಬೇಕು. ಇಷ್ಟಪಟ್ಟು ಕಲಿಸುವವರು ಇರುವಾಗ ಇಷ್ಟಪಟ್ಟು ಕಲಿಯವವರೂ ಇರಬೇಕು.

ಇದು ಇಪ್ಪತ್ತೊಂದನೇ ಶತಮಾನದ ಸ್ಪರ್ಧಾತ್ಮಕ ಯುಗವಾಗಿದೆ. ಕಲಿಕೆಯ ಮೂಲಕ ಲಭಿಸುವ ಜ್ಞಾನ ಮಹತ್ವಪೂರ್ಣವಾಗಿದೆ ಎಂದರು. ಮುಂದುವರಿದು ಮಾತನಾಡುತ್ತ ಜಿಲ್ಲೆಯ ಎರಡು ಸರಕಾರಿ ಶಾಲೆಗಳಿಗೆ ನಾನು ಬದುಕಿರುವವರೆಗೂ ನಗದು ಬಹುಮಾನವನ್ನು ಕೊಡುತ್ತೇನೆ ಎಂದು ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಹಾಸನ ಜಿಲ್ಲೆಯ ವಸತಿ ಶಾಲೆಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಸಿ.ಎನ್. ಉಷಾರವರು ಸ್ವಾತಂತ್ರ್ಯ ದಿನಾಚರಣೆಯ ಮಹತ್ವ ತಿಳಿಸಿದರು. ಕಂದಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮರಳಿ ಗೂಡಿಗೆ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಎಂ.ಹೆಚ್. ಯೋಗೇಶ್, ಕಾರ್ಯದರ್ಶಿ ಡಿ.ಟಿ. ಗಿರೀಶ್, ಉಪಾಧ್ಯಕ್ಷ ಕೆ. ಎಸ್. ಹರೀಶ್, ಖಜಾಂಚಿ ಕೆ.ಎಲ್. ವಸಂತಗೌಡ ನಿರ್ದೇಶಕರಾದ ಕೆ.ಎಸ್ ದಿನೇಶ್, ನಾಗೇಶ್ ರಾಘವೇಂದ್ರ, ಸುಜಯ್, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಪ್ರಾಂಶುಪಾಲರಾದ ಪ್ರಸವಿಯವರು ಇದ್ದರು. ಆಂಗ್ಲ ಭಾಷಾ ಶಿಕ್ಷಕರಾದ ಪ್ರಮೋದ್ ಎಲ್ಲರನ್ನು ಸ್ವಾಗತಿಸಿದರೆ ಕಂಪ್ಯೂಟರ್ ವಿಷಯ ಶಿಕ್ಷಕರಾದ ಚೇತನ್ ರವರು ವಂದಿಸಿದರು. ಶಿಕ್ಷಕರಾದ ವೀಣಾ ಮತ್ತು ಬಿ.ಡಿ. ಲತಾ ರವರು ಕಾರ್ಯಕ್ರಮ ನಿರೂಪಿಸಿದರು. ಹಾಜರಿದ್ದ ಎಲ್ಲಾ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಸಿಹಿ ವಿತರಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.