Sakaleshpur:ಪಟ್ಲಬೆಟ್ಟಕ್ಕೆ ತಾತ್ಕಾಲಿಕ ಪ್ರವೇಶ ನಿಷೇಧ ಕಾಡಾನೆಗಳ ಸಂಚಾರ ಹೆಚ್ಚಳ ಹಿನ್ನೆಲೆ ಅರಣ್ಯ ಇಲಾಖೆ ಎಚ್ಚರಿಕೆ

Sakaleshpur ಸಕಲೇಶಪುರ | ಕನ್ನಡಪೋಸ್ಟ್ ನ್ಯೂಸ್ ನೆಟ್ವರ್ಕ್
ಕಲೇಶಪುರ ತಾಲೂಕಿನ ಪ್ರಸಿದ್ಧ ಟ್ರೆಕ್ಕಿಂಗ್ ತಾಣವಾದ ಪಟ್ಲಬೆಟ್ಟಕ್ಕೆ ಪ್ರವಾಸಿಗರು ಹಾಗೂ ಸಾರ್ವಜನಿಕರ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.

ಪಟ್ಲಬೆಟ್ಟ ಪ್ರದೇಶದಲ್ಲಿ ಕಳೆದ ನಾಲ್ಕು ದಿನಗಳಿಂದ ಸುಮಾರು 10 ಕಾಡಾನೆಗಳ ಗುಂಪು ಬೀಡುಬಿಟ್ಟಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಅರಣ್ಯ ಇಲಾಖೆ ಈ ನಿರ್ಧಾರ ಕೈಗೊಂಡಿದೆ.

ಕಾಡಾನೆಗಳ ಸಂಚಾರ ಹೆಚ್ಚಿರುವುದರಿಂದ ಪ್ರವಾಸಿಗರು ಹಾಗೂ ಸ್ಥಳೀಯರು ಬೆಟ್ಟದತ್ತ ತೆರಳಿದರೆ ಅಪಾಯ ಸಂಭವಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ಸೂಚನೆ ಬರುವವರೆಗೆ ಪಟ್ಲಬೆಟ್ಟ ಪ್ರದೇಶಕ್ಕೆ ಯಾರೂ ತೆರಳಬಾರದು ಎಂದು ಸೂಚಿಸಲಾಗಿದೆ.
ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯ ಆಡಳಿತವು ಪ್ರದೇಶದಲ್ಲಿ ನಿಗಾ ವಹಿಸಿದ್ದು, ಕಾಡಾನೆಗಳ ಚಲನವಲನ ಕಡಿಮೆಯಾದ ಬಳಿಕ ಪ್ರವಾಸಿಗರ ಪ್ರವೇಶಕ್ಕೆ ಸಂಬಂಧಿಸಿದಂತೆ ಮುಂದಿನ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಪ್ರವಾಸಿಗರು ಮತ್ತು ಸ್ಥಳೀಯರು ತಮ್ಮ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಅಧಿಕಾರಿಗಳ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಮನವಿ ಮಾಡಲಾಗಿದೆ.