ಹಾಸನ, ಜುಲೈ 7, 2025: ಜಿಲ್ಲೆಯ ಸಕಲೇಶಪುರ ತಾಲೂಕಿನ ಕ್ಯಾನಹಳ್ಳಿ ಮತ್ತು ಚಿನ್ನಳ್ಳಿ ಗ್ರಾಮಗಳಲ್ಲಿ ಭಾರೀ ಮಳೆಯಿಂದ ಕಾಫಿ ಬೆಳೆಗೆ ಉಂಟಾದ ಹಾನಿಯನ್ನು ವಿಪಕ್ಷ ನಾಯಕ ಆರ್. ಅಶೋಕ್ ಭೇಟಿ ನೀಡಿ ಪರಿಶೀಲಿಸಿದರು.
ಅತಿಯಾದ ತೇವಾಂಶದಿಂದ ಕಾಫಿ ಬೀಜ ಮತ್ತು ಎಲೆಗಳು ಕೊಳೆಯುತ್ತಿದ್ದು, ಸುಮಾರು 40-50% ಬೆಳೆ ನಷ್ಟವಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ಹಾನಿಯಿಂದ ರಾಜ್ಯಕ್ಕೆ 600-700 ಕೋಟಿ ರೂ. ಆದಾಯ ನಷ್ಟವಾಗಿದೆ ಎಂದು ಆರ್. ಅ ಶೋಕ್ ಆರೋಪಿಸಿದರು.
ಕಾಫಿ ಬೆಳೆಗಾರರು ತಮ್ಮ ಸಮಸ್ಯೆಗಳನ್ನು ಆರ್. ಅಶೋಕ್ ಅವರೊಂದಿಗೆ ಹಂಚಿಕೊಂಡಿದ್ದು, ಶಾಸಕ ಸಿಮೆಂಟ್ ಮಂಜು ಮತ್ತು ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. “ಕಾಫಿ ಮತ್ತು ಮೆಣಸು ಕಪ್ಪಾಗುತ್ತಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ಪರಿಹಾರ ಘೋಷಿಸಬೇಕು” ಎಂದು ಆರ್. ಅಶೋಕ್ ಒತ್ತಾಯಿಸಿದರು.
ರಾಜ್ಯ ಸರ್ಕಾರದ ನಿರ್ಲಕ್ಷ್ಯವನ್ನು ತೀವ್ರವಾಗಿ ಟೀಕಿಸಿದ ಅವರು, “ಸರ್ಕಾರ ಜನರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಹಾಸನಕ್ಕೆ ಭೇಟಿ ನೀಡಲು ಆಸಕ್ತಿ ತೋರಿಲ್ಲ. ಅಧಿಕಾರಿಗಳು ಸರಿಯಾದ ಮಾಹಿತಿ ನೀಡದೆ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಈ ಸರ್ಕಾರ ಜನರ ಸಂಕಷ್ಟಕ್ಕೆ ಕಿವಿಗೊಡದೆ ನಿದ್ದೆ ಮಾಡುತ್ತಿದೆ” ಎಂದು ಕಿಡಿಕಾರಿದರು.
ಹಾಸನ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣಗಳ ಬಗ್ಗೆಯೂ ಆರ್. ಅಶೋಕ್ ಕಳವಳ ವ್ಯಕ್ತಪಡಿಸಿದ್ದಾರೆ. “ಇಡೀ ರಾಜ್ಯದಲ್ಲಿ ಇಂತಹ ಸಮಸ್ಯೆ ಇಲ್ಲದಿದ್ದರೆ, ಹಾಸನದಲ್ಲಿ ಮಾತ್ರ ಏಕೆ? ಸರ್ಕಾರ ಸಮೀಕ್ಷೆ ನಡೆಸಿ ವರದಿ ಸಲ್ಲಿಸಬೇಕು. ಮುಖ್ಯಮಂತ್ರಿಗಳು ಕಾಣೆಯಾಗಿದ್ದಾರೆ, ಯಾವ ಮಂತ್ರಿಗಳೂ ಸರಿಯಾಗಿ ಪರಿಶೀಲನೆ ಮಾಡಿಲ್ಲ” ಎಂದು ಆಕ್ಷೇಪಿಸಿದರು.
ಕಾಫಿ ಬೆಳೆಗಾರರ ಒತ್ತುವರಿ ಭೂಮಿಯನ್ನು ಲೀಸ್‌ಗೆ ಕೊಡುವ ಆಕ್ಟ್‌ಗೆ ಸರ್ಕಾರ ರೂಲ್ಸ್ ರಚಿಸಿಲ್ಲ ಎಂದು ಆರೋಪಿಸಿದ ಆರ್. ಅಶೋಕ್, “ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗದ ಕಾಫಿ ಬೆಳೆಗಾರರಿಗೆ ಲೀಸ್ ಒದಗಿಸಿ, ಲೋನ್ ಪಡೆಯಲು ಅವಕಾಶ ಕಲ್ಪಿಸಬೇಕು. ಈ ಸರ್ಕಾರ ಕೊಡದಿದ್ದರೆ, ನಮ್ಮ ಸರ್ಕಾರ ಬಂದು ಈ ಕೆಲಸ ಮಾಡುತ್ತದೆ” ಎಂದು ಭರವಸೆ ನೀಡಿದರು.
ಕಾಫಿ ಬೋರ್ಡ್ ಮೂಲಕ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ. “ರೈತರಿಗೆ ಪರಿಹಾರ ಮತ್ತು ನ್ಯಾಯ ಸಿಗುವವರೆಗೆ ನಾವು ಹೋರಾಟ ಮಾಡುತ್ತೇವೆ” ಎಂದರು.










