ಬಸವಾದಿ ಶರಣರ ವಚನ ಎಂದೆಂದೂ ಪ್ರಸ್ತುತ: ನುಗ್ಗೇಹಳ್ಳಿ ಹಿರೇಮಠದ ಮಹದೇಶ್ವರ ಶ್ರೀ

ಹೊಳೆನರಸೀಪುರ : ಅಧ್ಯಾತ್ಮಕತೆಯೊಂದಿಗೆ ಪ್ರಾಪಂಚಿಕ ನೈಜತೆಯ ಚಿತ್ರಣ ಕೊಟ್ಟದ್ದು, ಭಾರತ ಮಾತ್ರ. ಅದರಲ್ಲೂ ವೀರಶೈವ ಧರ್ಮದ ವಚನಗಳು  ಪ್ರಸ್ತುತವಾಗಿವೆ ಎಂದು ಚನ್ನರಾಯಪಟ್ಟಣ ತಾಲೂಕು ನುಗ್ಗೆಹಳ್ಳಿ ಗ್ರಾಮದ ಹಿರೇಮಠದ ಶ್ರೀಮಹೇಶ್ವರ ಶಿವಾಚಾರ್ಯಸ್ವಾಮಿ ಆಶೀರ್ವಚನ ನೀಡಿದರು.

ಪಟ್ಟಣದ ಭಸವ ಭವನದಲ್ಲಿ ವೀರಶೈವ ಲಿಂಗಾಯಿತ ನೌಕರರ ಸಂಘ, ನಡೆಸಿದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವಹಿಸಿ ಮಾತನಾಡಿದ ಅವರು, ನಿಷ್ಟೆಯಿಂದ ಕಾಯಕ ನಡೆಸುವ ಮೂಲಕ ಸಮಾಜದಲ್ಲಿ ಶ್ರೇಷ್ಟತೆಯನ್ನು ಕಂಡುಕೊಳ್ಳುವ ಮಾರ್ಗ, ಲಿಂಗಾಯಿತ ವಚನದೊಂದಿಗೆ ದರ್ಶನ ಮಾಡಿಸಿದ್ದಾರೆ. ಬಸವೇಶ್ವರರು ಸಮಾನತೆಯನ್ನು ಜಗತ್ತಿಗೆ ಸಾರಿದವರು. ಧರ್ಮಗುರು ಪರಂಪರೆಯಲ್ಲಿ ದೀಕ್ಷೆ ನೀಡಿ ಸಾಕ್ಷಾತ್ಕಾರದ ಮಾರ್ಗದರ್ಶನ ನೀಡುವೆವು. ಆದರೆ ಶಿಕ್ಷಕರು ಶಿಕ್ಷಣ ನೀಡಿ, ಜ್ಞಾನದ ದೀವಿಗೆ ಬೆಳಗುವರು. ಇದು ಅಂತರAಗ ಮತ್ತು ಬಹಿರಂಗ ಶುದ್ದಿ ಎನ್ನಬಹುದು. ಲಿಂಗಧರಿಸಿ ಆಚಾರವಂತರಾಗಿರುವ ಲಿಂಗಾಯಿತ ಧರ್ಮ ದೇಹತ್ಯಾಗ ಮಾಡಿದಾಗಲೂ ಲಿಂಗೈಕ್ಯ ಎಂದೆನ್ನಲಾಗುವುದು. ಹುಟ್ಟು, ಸಾವುಗಳ ನಡುವೆಯೂ ಲಿಂಗಾರಧನೆ ವೀರಶೈವ ಆರಾಧನೆಯಲ್ಲಿ ಪ್ರಧಾನ ಎಂದರು.

ಹಾಸನ ಎವಿಕೆ ಕಾಲೇಜು ಪ್ರಾಂಶುಪಾಲ ಡಾ.ಸಿ.ಚ.ಯತೀಶ್ವರ ಮಾತನಾಡಿ, ವಿದ್ಯೆ ಎನ್ನುವುದು ಯಾರೂ ಕದಿಯಲಾಗದ ಸಂಪತ್ತು. ಜ್ಞಾನದ ಮೂಲಕ ಇಡೀ ವಿಶ್ವವನ್ನೇ ಗೆಲ್ಲಬಹುದು ಎಂದು ವಿವೇಕಾನಂದರು ತೋರಿಸಿಕೊಟ್ಟಿದ್ದಾರೆ. ಇಂದು ಪ್ರತಿಭೆಯಾಗಿ ಅರಳಿರುವ ಮಕ್ಕಳು ಮುಂದೆಯೂ ಹೆಚ್ಚಿನ ಜ್ಞಾನ ಸಂಪಾದನೆಗೆ ಗಮನ ಕೊಡಬೇಕು. ಬಡತನವನ್ನು ಎಂದೂ ಶಾಪ ಎಂದುಕೊಳ್ಳಬಾರದು. ಎಲ್ಲವನ್ನೂ ಮೀರಿದ್ದು, ಜ್ಞಾನವೇ ಆದರ ಮೂಲಕ ಎಲ್ಲವನ್ನೂ ಸಂಪಾದಿಸಿಕೊಳ್ಳಬಹುದು. ಚೋರ ಭಯ ಇಲ್ಲದ ವಿದ್ಯೆಗೆ ಪ್ರಧಾನ್ಯತೆ ಇದೆ. ಇದನ್ನು ಅರಿತು ವಿದ್ಯಾರ್ಜನೆ ಮಾಡಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಮೈಸೂರಿನ ವಿಶ್ವೇಶ್ವರಯ್ಯ ತಾಂತ್ರಿಕ ಇಲಾಖೆ ಪ್ರಾದೇಶಿಕ ನಿರ್ದೇಶಕ ಟಿ.ಪಿ.ರೇಣುಕಾಮೂರ್ತಿ ಮಾತನಾಡಿದರು. ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಸಮೂದಾಯದ ವಿದ್ಯಾರ್ಥಿಗಳಿಗೆ ಪುರಸ್ಕರಿಸಲಾಯಿತು. ಸರಕಾರಿ ಸೇವೆಯಿಂದ ನಿವೃತ್ತಿಗೊಂಡ ನೌಕರರನ್ನು ಸನ್ಮಾನಿಸಲಾಯಿತು.

ತಾಲೂಕು ವಿರಶೈವಲಿಂಗಾಯಿತ ನೌಕರರ ಸಂಘದ ಅಧ್ಯಕ್ಷ ಎಂ.ಸಿ.ಕುಮಾರಸ್ವಾಮಿ, ವೀರಶೈವ ಸಂಘದ ತಾಲೂಕು ಸಂಘದ ಅಧ್ಯಕ್ಷ ಎಸ್.ಎನ್.ನಂಜಪ್ಪ. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಹಲಿಂಗ, ಅಖಿಲಭಾರತ ವೀರಶೈವ ಸಮಾಜದ ಅಧ್ಯಕ್ಷ ಶಿವಕುಮಾರ್, ವೀರಶೈವ ಮಹಾವೇದಿಕೆ ರಾಜ್ಯ ಸಂಚಾಲಕ ಬಿ.ಆರ್.ವಸಂತಕುಮಾರ್, ಸಮೂದಾಯದ ಮುಖಂಡರಾದ ಎಚ್.ಎಸ್.ಪುಟ್ಟಸ್ವಾಮಪ್ಪ, ಪ್ರಭುಶಂಕರ್ ಇತರರು ಉಪಸ್ಥಿತರಿದ್ದರು.