ಹಾಸನ: ನಗರದ ಹೃದಯ ಭಾಗವಾದ ಕಸ್ತೂರಬಾ ರಸ್ತೆಯಲ್ಲಿ ರಸ್ತೆ ಮತ್ತು ಫುಟ್‌ಪಾತ್‌ಗಳನ್ನು ಆಕ್ರಮಿಸಿಕೊಂಡು ಅನಧಿಕೃತವಾಗಿ ಹಣ್ಣಿನ ಅಂಗಡಿ ಹಾಕಿಕೊಂಡಿದ್ದ ವ್ಯಾಪಾರಿಗಳ ವಿರುದ್ಧ ಗುರುವಾರ ಬೆಳಿಗ್ಗೆ ಮಹಾನಗರ ಪಾಲಿಕೆ ದೊಡ್ಡ ಮಟ್ಟದ ತೆರವು ಕಾರ್ಯಾಚರಣೆ ನಡೆಸಿತು.
ಹಲವು ದಿನಗಳಿಂದ ರಸ್ತೆ ಬದಿಯ ಅನಧಿಕೃತ ವ್ಯಾಪಾರಗಳಿಂದ ಸಾರ್ವಜನಿಕರಿಗೆ ಹಾಗೂ ಸಂಚಾರ ತೊಂದರೆ ಉಂಟಾಗುತ್ತಿದೆ ಎಂಬ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಬೆಳಗ್ಗೆ ದಿಢೀರ್ ಕಾರ್ಯಾಚರಣೆ ನಡೆಸಿದರು.
ಬೆಳಗ್ಗೆ ಆರಂಭವಾದ ಕಾರ್ಯಾಚರಣೆ ವೇಳೆ ಪೌರ ಕಾರ್ಮಿಕರು, ಸೂಪರ್ ವೈಸರ್‌ಗಳು, ಆರೋಗ್ಯ ನಿರೀಕ್ಷಕರು ಮತ್ತು ಪಾಲಿಕೆ ಸಿಬ್ಬಂದಿ ಒಂದಾಗಿ ತಂಡ ರಚಿಸಿ ಫುಟ್‌ಪಾತ್ ಹಾಗೂ ರಸ್ತೆ ಬದಿಯಲ್ಲಿ ಹಾಕಿದ್ದ ಅಂಗಡಿಗಳನ್ನು ತೆರವುಗೊಳಿಸಿದರು.
ಈ ಸಂದರ್ಭದಲ್ಲಿ ಅನಧಿಕೃತ ವ್ಯಾಪಾರಿಗಳು ತೀವ್ರ ವಿರೋಧ ವ್ಯಕ್ತಪಡಿಸಿ ಪಾಲಿಕೆ ಸಿಬ್ಬಂದಿಗಳೊಂದಿಗೆ ವಾಗ್ವಾದ ನಡೆಸಿದ ಪ್ರಸಂಗವೂ ನಡೆಯಿತು. ಕೆಲವು ವ್ಯಾಪಾರಿಗಳು ತಮ್ಮ ಜೀವನೋಪಾಯ ಕಳೆದುಕೊಳ್ಳುತ್ತಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರೆ, ಸಾರ್ವಜನಿಕರು ಸಂಚಾರಕ್ಕೆ ಅಡೆ ತಡೆ ಉಂಟಾಗುತ್ತಿದೆ ಎಂದು ಪಾಲಿಕೆಯ ಕ್ರಮವನ್ನು ಕೆಲವರು ಸ್ವಾಗತಿಸಿದರು.
ಮಹಾನಗರ ಪಾಲಿಕೆ ಪೌರಾಯುಕ್ತ ಕೃಷ್ಣಮೂರ್ತಿ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದರು. ಈ ವೇಳೆ ಮಾತನಾಡಿದ ಅವರು, ಕಸ್ತೂರಬಾ ರಸ್ತೆಯ ಫುಟ್‌ಪಾತ್ ಮತ್ತು ಸಾರ್ವಜನಿಕ ಜಾಗವನ್ನು ಅನಧಿಕೃತವಾಗಿ ಹಣ್ಣಿನ ವ್ಯಾಪಾರಿಗಳು ಆಕ್ರಮಿಸಿಕೊಂಡಿದ್ದರು. ಇದು ಕೇವಲ ಸಂಚಾರಕ್ಕೆ ತೊಂದರೆಯಲ್ಲ, ಅಸ್ವಚ್ಛತೆಗೂ ಕಾರಣವಾಗುತ್ತಿತ್ತು. ಜಿಲ್ಲಾಧಿಕಾರಿಗಳು ಮತ್ತು ಸರ್ಕಾರದ ಆದೇಶದಂತೆ ಸಾರ್ವಜನಿಕ ಜಾಗದಲ್ಲಿ ವ್ಯಾಪಾರ ಮಾಡುವುದು ನಿಷೇಧ. ನಿಗದಿಪಡಿಸಿದ ಸ್ಥಳಗಳಲ್ಲಿ ಮಾತ್ರ ವ್ಯಾಪಾರ ಮಾಡಬೇಕು ಎಂದು ತಿಳಿಸಿದರು.
ರಸ್ತೆ ಬದಿ ಹಾಗೂ ಫುಟ್‌ಪಾತ್ ಮೇಲೆ ಮಳಿಗೆ ಹಾಕಿ ವ್ಯಾಪಾರ ಮಾಡುವುದನ್ನು ಮುಂದುವರೆಸಿದರೆ ಕೇಸು ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು. ಫುಟ್‌ಪಾತ್ ಜಾಗ ಸಾರ್ವಜನಿಕರ ಮುಕ್ತ ಸಂಚಾರಕ್ಕಾಗಿ. ಅದನ್ನು ಹಣ್ಣಿನ ಅಂಗಡಿಗಳಾಗಿ ಬಳಸುವಂತಿಲ್ಲ. ವ್ಯಾಪಾರಿಗಳಿಗೆ ಬದಲಾಗಿ ಸರಿಯಾದ ಸ್ಥಳಾವಕಾಶ ಒದಗಿಸಲು ಪಾಲಿಕೆ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.
ತೆರವು ಕಾರ್ಯಾಚರಣೆ ನಂತರವೂ ಮತ್ತೆ ಅನಧಿಕೃತ ವ್ಯಾಪಾರ ಆರಂಭಿಸಿದರೆ ಕಠಿಣ ರೀತಿಯಲ್ಲಿ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಸ್ಪಷ್ಟ ಎಚ್ಚರಿಕೆ ನೀಡಿದರು. ಈ ಕ್ರಮದಿಂದ ರಸ್ತೆಯ ಎರಡೂ ಬದಿಗಳ ಸಂಚಾರ ಸುಗಮವಾಗುವ ನಿರೀಕ್ಷೆ ವ್ಯಕ್ತವಾಗಿದೆ.










