ಮೈಸೂರು : ಕುಮಾರಸ್ವಾಮಿ ಪ್ಲಾನ್‌ನಿಂದ ಚಾಮುಂಡೇಶ್ವರಿಯಲ್ಲಿ ಜೆಡಿಎಸ್ ಚಟುವಟಿಕೆ:

ಅಪ್ಪನ ಎದುರು ಮಗ ಸ್ಪರ್ಧೆ ? ಹರೀಶ್ ಗೌಡ ಸ್ಪರ್ಧೆಗೆ ಹಸಿರು ನಿಶಾನೆ?

ಮೈಸೂರು :  ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡರು ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಇದೇ ವೇಳೆ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೊಸ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸುಳಿವು ನೀಡಿರುವುದು ಕುತೂಹಲ ಕೆರಳಿಸಿದೆ.

ಈ ನಡುವೆ ಜಿ.ಟಿ.ಡಿ ಪುತ್ರ ಹರೀಶ್ ಗೌಡ ಕ್ಷೇತ್ರದಲ್ಲಿ ಸಕ್ರಿಯವಾಗಿ ಕಾಣಿಸಿಕೊಂಡಿದ್ದು, ಚುನಾವಣಾ ಸಿದ್ಧತೆಗಳ ಸಂದೇಶ ನೀಡುತ್ತಿದ್ದಾರೆ. ಹೀಗಾಗಿ ಚಾಮುಂಡೇಶ್ವರಿಯಲ್ಲಿ ಜೆಡಿಎಸ್ ಟಿಕೆಟ್ ಮತ್ತೆ ಜಿ.ಟಿ.ದೇವೇಗೌಡರಿಗೇ ಸಿಗುತ್ತದೆಯಾ? ಅಥವಾ ಹೊಸ ಮುಖವಾಗಿ ಹರೀಶ್ ಗೌಡರಿಗಾ? ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ

ಮುಂದಿನ ವಿಧಾನಸಭಾ ಚುನಾವಣೆಗೆ ಇನ್ನೂ ಎರಡು ವರ್ಷಗಳಿದ್ದರೂ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಜೋರಾಗಿದೆ. ಸಾಂಪ್ರದಾಯಿಕ ಮತಬ್ಯಾಂಕ್ ಹೊಂದಿರುವ ಜೆಡಿಎಸ್‌ನ ಭದ್ರಕೋಟೆ ಎಂದೇ ಗುರುತಿಸಿಕೊಂಡಿರುವ ಈ ಕ್ಷೇತ್ರದಲ್ಲಿ ಅಂತರಂಗದ ಚರ್ಚೆಗಳು ತೀವ್ರಗೊಂಡಿವೆ. ಹಾಲಿ ಶಾಸಕ ಜಿ.ಟಿ.ದೇವೇಗೌಡರು ಜೆಡಿಎಸ್ ಶಾಸಕರಾಗಿದ್ದರೂ, ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿರುವುದು ಗಮನ ಸೆಳೆಯುತ್ತಿದೆ.

ಕುಮಾರಸ್ವಾಮಿಯವರ ಸುಳಿವು

ಚಾಮುಂಡೇಶ್ವರಿ ಕ್ಷೇತ್ರಕ್ಕೆ ಮುಂದಿನ ಚುನಾವಣೆಯಲ್ಲಿ “ಘಟಾನುಘಟಿ ನಾಯಕ”ರನ್ನು ಪರಿಚಯಿಸುವ ಸುಳಿವು ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ನೀಡಿದ್ದಾರೆ. ಅವರ ಈ ಹೇಳಿಕೆ ಮೈಸೂರು ಜೆಡಿಎಸ್ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಆ ನಾಯಕ ಯಾರು? ಎಂಬ ಪ್ರಶ್ನೆ ಇದೀಗ ಕಾರ್ಯಕರ್ತರು ಮತ್ತು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಹರೀಶ್ ಗೌಡ ಸಕ್ರಿಯತೆ

ಈ ನಡುವೆಯೇ ಜಿ.ಟಿ.ದೇವೇಗೌಡರ ಪುತ್ರ ಜಿ.ಡಿ.ಹರೀಶ್ ಗೌಡ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಹುಟ್ಟುಹಬ್ಬದ ಕಾರ್ಯಕ್ರಮಗಳ ಹೆಸರಿನಲ್ಲಿ ಕ್ಷೇತ್ರದಾದ್ಯಂತ ಓಡಾಡುತ್ತಿರುವ ಅವರು, ಕಾರ್ಯಕರ್ತರ ಜೊತೆ ಸಂಪರ್ಕ ಬೆಳೆಸುತ್ತಿದ್ದಾರೆ. ಅವರ ಚಟುವಟಿಕೆಗಳು ಚುನಾವಣಾ ಸಿದ್ಧತೆಯ ಸೂಚನೆಗಳಂತೆ ಕಾಣಿಸುತ್ತಿವೆ.

ಬ್ಯಾನರ್‌ಗಳಲ್ಲಿ ಜಿ.ಟಿ.ಡಿ ಫೋಟೋ ಮಿಸ್

ಹರೀಶ್ ಗೌಡರ ಹುಟ್ಟುಹಬ್ಬದ ಬ್ಯಾನರ್‌ಗಳಲ್ಲಿ ತಂದೆ ಜಿ.ಟಿ.ದೇವೇಗೌಡರ ಫೋಟೋ ಕಾಣಿಸದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕೆಲ ಬೆಂಬಲಿಗರು ಸಾರ್ವಜನಿಕವಾಗಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಮನವಿ ಮಾಡಿದಾಗ, ಹರೀಶ್ ಗೌಡ ತಲೆಯಾಡಿಸಿ ಪ್ರತಿಕ್ರಿಯೆ ನೀಡಿರುವುದು ರಾಜಕೀಯ ಕುತೂಹಲ ಹೆಚ್ಚಿಸಿದೆ.

ದಳಪತಿಗಳ ತಂತ್ರ ಏನು?

ದಳಪತಿಗಳು ಜಿ.ಟಿ.ದೇವೇಗೌಡರಿಗೆ ಬದಲಾಗಿ ಪುತ್ರ ಹರೀಶ್ ಗೌಡರನ್ನು ಮುನ್ನೆಲೆಗೆ ತರುವ ಯೋಚನೆಯಲ್ಲಿದ್ದಾರಾ? ಅಥವಾ ಅನುಭವೀ ನಾಯಕರಾದ ಜಿ.ಟಿ.ಡಿ ಅವರ ಮೇಲೆಯೇ ಮತ್ತೆ ನಂಬಿಕೆ ಇಡಲಿದೆಯಾ? ಎಂಬ ಪ್ರಶ್ನೆಗಳು ಜೆಡಿಎಸ್ ಪಡಸಾಲೆಯಲ್ಲಿ ಕೇಳಿಬರುತ್ತಿವೆ. ಚಾಮುಂಡೇಶ್ವರಿಯ ಆಶೀರ್ವಾದ ತಂದೆಗಾ, ಮಗನಿಗಾ ಎಂಬುದು ಮುಂದಿನ ರಾಜಕೀಯ ಬೆಳವಣಿಗೆಗಳ ಮೇಲೆ ನಿರ್ಧಾರವಾಗಲಿದೆ.