ಮಕ್ಕಳು ಅಂತ್ಯಸಂಸ್ಕಾರ ಮಾಡುವಂತಿಲ್ಲ, ಹುಟ್ಟೂರಿನಲ್ಲಿ ಹಿಂದು ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿ, ಸಹನ ವಿಜಯಕುಮಾರ್ ಗೆ ಜವಾಬ್ದಾರಿ, ಮಗನಿಗೆ ಕೊಟ್ಟ ಉಡುಗೊರೆ ಹಣ ರದ್ದು: ಸಂಚಲನ ಸೃಷ್ಟಿಸಿದ ಎಸ್.ಎಲ್.ಭೈರಪ್ಪ ವಿಲ್ ತಿದ್ದುಪಡಿ ದಾಖಲೆ!

ಮೈಸೂರು :  ನಿನ್ನೆ ಕೊನೆಯುಸಿರೆಳೆದ ಕನ್ನಡ ಸಾಹಿತ್ಯ ಲೋಕದ ದಿಗ್ಗಜ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಎಸ್‌.ಎಲ್‌.ಭೈರಪ್ಪ (94) ಅವರು ಕೆಲವೇ ತಿಂಗಳುಗಳ ಮುಂಚಿತವಾಗಿ ತಮ್ಮ ಇಚ್ಛಾಪತ್ರಕ್ಕೆ (ಉಯಿಲು) ಮಹತ್ವದ ತಿದ್ದುಪಡಿ ದಾಖಲಿಸಿಕೊಂಡಿದ್ದಾರೆ‌ನ್ನಲಾದ ನೋಂದಾಯಿತ ದಸ್ತಾವೇಜು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಅದರಲ್ಲಿನ ಅಂಶಗಳು ಅಚ್ಚರಿ ಮೂಡಿಸಿದ್ದು, ಸಂಚಲನಕ್ಕೆ ಕಾರಣವಾಗಿವೆ.

ಮೈಸೂರಿನ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಜೂನ್ 17, 2025ರಂದು ಅಧಿಕೃತವಾಗಿ ದಾಖಲಾಗಿರುವ ಮಾಹಿತಿಯಿರುವ  ಈ ತಿದ್ದುಪಡಿ ಪತ್ರದಲ್ಲಿ ಕುಟುಂಬ ಸಂಬಂಧಿ ವಿವಾದದ ನಡುವೆಯೇ ಹಲವು ಪ್ರಮುಖ ನಿರ್ಧಾರಗಳನ್ನು ಭೈರಪ್ಪ ದಾಖಲಿಸಿದ್ದಾರೆ.

ತಿದ್ದುಪಡಿ ಪ್ರಮುಖ ಅಂಶಗಳು

  • ಮಗನಿಗೆ ನೀಡಿದ್ದ ಕೊಡುಗೆ ರದ್ದು : ಭೈರಪ್ಪ ಅವರು ತಮ್ಮ ಕಿರಿಯ ಪುತ್ರ ಎಸ್‌.ಬಿ. ಉದಯ್ ಶಂಕರ ಅವರಿಗೆ ಉಯಿಲಿನಲ್ಲಿ ಮುಂಚಿತವಾಗಿ ನಿಗದಿಪಡಿಸಿದ್ದ ₹50 ಲಕ್ಷಗಳ ಆರ್ಥಿಕ ಕೊಡುಗೆಯನ್ನು ಸಂಪೂರ್ಣವಾಗಿ ಹಿಂಪಡೆಯಲಾಗಿದೆ. ಇದಕ್ಕೆ ಸಂಬಂಧಿಸಿದ ಎಲ್ಲಾ ಅಧಿಕಾರಗಳನ್ನು ಕೂಡ ರದ್ದುಪಡಿಸಲಾಗಿದೆ.
  • ಅಂತ್ಯಕ್ರಿಯೆಗೆ ವಿಶೇಷ ಸೂಚನೆ : ಭೈರಪ್ಪ ತಮ್ಮ ಪಾರ್ಥೀವ ಶರೀರವನ್ನು ಹುಟ್ಟೂರಾದ ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲ್ಲೂಕಿನ ಸಂತೇಶಿವರ ಗ್ರಾಮಕ್ಕೆ ಕೊಂಡೊಯ್ದು ಹಿಂದೂ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನಡೆಸುವಂತೆ ನಿರ್ದೇಶಿಸಿದ್ದಾರೆ. ಈ ಕಾರ್ಯವನ್ನು ತಮ್ಮ ಮಗಳಂತೆ ಬೆಳೆದು, ಸಾಹಿತ್ಯ ಕ್ಷೇತ್ರದಲ್ಲೂ ತೊಡಗಿರುವ ಬೆಂಗಳೂರಿನ ಶ್ರೀಮತಿ ಸಹನ ವಿಜಯ್‌ಕುಮಾರ್ ಅವರೇ ನೆರವೇರಿಸಬೇಕು ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಇಬ್ಬರು ಪುತ್ರರಾದ ರವಿಶಂಕರ್ ಹಾಗೂ ಉದಯ್ ಶಂಕರರಿಗೆ ಅಂತ್ಯಕ್ರಿಯೆಯಲ್ಲಿ ಯಾವುದೇ ಪಾತ್ರ ಇರಬಾರದು ಎಂದು ಉಲ್ಲೇಖಿಸಲಾಗಿದೆ.
  • ತಮ್ಮ ಆರೋಗ್ಯದ ಘೋಷಣೆ : ತಿದ್ದುಪಡಿ ಪತ್ರ ಬರೆದ ಸಂದರ್ಭದಲ್ಲಿ ತಮ್ಮ ಬುದ್ಧಿಶಕ್ತಿ ಸಂಪೂರ್ಣ ಹತೋಟಿಯಲ್ಲಿದ್ದು, ಯಾವುದೇ ಒತ್ತಡವಿಲ್ಲದೆ ಸ್ವಇಚ್ಛೆಯಿಂದಲೇ ಈ ತಿದ್ದುಪಡಿಯನ್ನು ಮಾಡಿದ್ದಾರೆ ಎಂಬುದನ್ನು ಭೈರಪ್ಪ ಸ್ಪಷ್ಟಪಡಿಸಿದ್ದಾರೆ.

ಕುಟುಂಬದಲ್ಲಿ ಕಾನೂನು ಹೋರಾಟ

ಭೈರಪ್ಪ ಅವರ ಪತ್ನಿ ಬಿ.ಎಸ್. ಸರಸ್ವತಿ ಹಾಗೂ ಪುತ್ರರು ಮೈಸೂರಿನ ಪ್ರಧಾನ ಜಿಲ್ಲಾ ನ್ಯಾಯಾಲಯದಲ್ಲಿ ಭೈರಪ್ಪರ ನೆನಪು ಹಾಗೂ ಬುದ್ಧಿಶಕ್ತಿ ಕುಂಠಿತವಾಗುತ್ತಿದೆ ಎಂಬ ಆಧಾರದ ಮೇಲೆ ‘ಗಾಡಿಯನ್ ಅಂಡ್ ವಾರ್ಡ್’ ಪ್ರಕರಣ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ತಮ್ಮ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಲು ಭೈರಪ್ಪ ಹೊಸ ತಿದ್ದುಪಡಿ ಮಾಡಲು ನಿರ್ಧರಿಸಿದ್ದಾಗಿ ದಸ್ತಾವೇಜಿನಲ್ಲಿ ಉಲ್ಲೇಖಿಸಿದ್ದಾರೆ.

ಉಯಿಲು ಇನ್ನೂ ಬದಲಾಯಿಸುವ ಹಕ್ಕು

2022ರಲ್ಲಿ ಮೂಲ ಉಯಿಲು ಬರೆದ ಭೈರಪ್ಪ, 2025 ಜನವರಿಯಲ್ಲಿ ಮೊದಲ ತಿದ್ದುಪಡಿ ಮಾಡಿಕೊಂಡಿದ್ದರು. ಇತ್ತೀಚಿನ ತಿದ್ದುಪಡಿ ನಂತರವೂ ಭವಿಷ್ಯದಲ್ಲಿ ಮತ್ತಷ್ಟು ತಿದ್ದುಪಡಿ ಅಥವಾ ರದ್ದುಗೊಳಿಸುವ ಹಕ್ಕನ್ನು ತಮ್ಮಲ್ಲೇ ಉಳಿಸಿಕೊಂಡಿರುವುದಾಗಿ ಅವರು ತಿಳಿಸಿದ್ದಾರೆ.

ಈ ಬೆಳವಣಿಗೆ ಭೈರಪ್ಪ ಕುಟುಂಬದಲ್ಲಿ ನಡೆಯುತ್ತಿದ್ದ ಒಳಜಗಳವನ್ನು ಬಯಲಿಗೆ ತಂದಿದೆ. ಅವರ ಉಯಿಲಿನಲ್ಲಿರುವ ನಿರ್ಧಾರವು ಭಾರಿ ಚರ್ಚೆಗೆ ಗ್ರಾಸವಾಗುವ ಲಕ್ಷಣಗಳು ಗೋಚರಿಸುತ್ತಿವೆ.