12.9 C
Munich
Home News ಹಾಸನ: ಸಾಹಿತಿ ಡಾ. ಎಸ್‌.ಎಲ್‌. ಭೈರಪ್ಪ ಅವರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಶ್ರದ್ಧಾಂಜಲಿ

ಹಾಸನ: ಸಾಹಿತಿ ಡಾ. ಎಸ್‌.ಎಲ್‌. ಭೈರಪ್ಪ ಅವರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಶ್ರದ್ಧಾಂಜಲಿ

Instead of viewing literary figure Dr. S.L. Bhyrappa as a right-wing author, we should develop an approach to understanding his writing.

ಹಾಸನ: ಸಾಹಿತಿ ಡಾ. ಎಸ್‌‍.ಎಲ್‌. ಭೈರಪ್ಪ ಅವರನ್ನು ಬಲಪಂಥೀಯ ಲೇಖಕ ಎಂದು ನೋಡುವ ಬದಲು ಅವರ ಬರವಣಿಗೆಯನ್ನು ಅರ್ಥೈಸಿಕೊಳ್ಳುವ ವ್ಯವಧಾನ ಬೆಳೆಸಿಕೊಳ್ಳಬೇಕು. ಅಂತರಂಗದ ಭಾವನೆಗಳನ್ನು ಅಕ್ಷರ ರೂಪಕ್ಕೆ ತಂದ ಶ್ರೇಷ್ಠ ಸಾಹಿತಿ ಅವರಾಗಿದ್ದರೆಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ. ಎಚ್‌.ಎಲ್‌. ಮಲ್ಲೇಶಗೌಡ ಅವರು ಹೇಳಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ಸಾಹಿತಿ ಡಾ. ಎಸ್‌‍.ಎಲ್‌. ಭೈರಪ್ಪನವರಿಗೆ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ, ಅವರ ಪುಸ್ತಕಗಳಲ್ಲಿ ಬಲಪಂಥವಿಲ್ಲ. ಭೈರಪ್ಪ ಅವರು ಅಧ್ಯಯನಶೀಲ ಬರಹಗಾರರು. ಅವರಷ್ಟು ಅಧ್ಯಯನ ಮಾಡಿ ಬರೆದವರನ್ನು ನಾನಂತೂ ಕಂಡಿಲ್ಲ. ನನ್ನ ಬರಹದ ಸತ್ವ ಗ್ರಾಮೀಣ ಬದುಕು ಎಂಬುದು ಅವರ ನಿಲುವಾಗಿತ್ತು. ಜೀವನದಲ್ಲಿ ಎದುರಾಗುವ ನೋವು ಸವಾಲುಗಳು ಮನುಷ್ಯನನ್ನು ಗಟ್ಟಿಗೊಳಿಸುತ್ತದೆ ಎಂಬುದಕ್ಕೆ ಅವರೇ ಸಾಕ್ಷಿ ಎಂದರು.

ಐಟಿ-ಬಿಟಿ ಕೆಲಸಗಾರರಿಗೂ ಸಾಹಿತ್ಯದ ಅಭಿರುಚಿ ಬೆಳೆಸಿದವರು ಭೈರಪ್ಪ. ಗೃಹಭಂಗ, ವಂಶವೃಕ್ಷ, ನಾಯಿ ನೆರಳು, ತಬ್ಬಲಿಯು ನಿನಾದೆ ಮಗನೆ, ಅಂಚು, ಸಾಕ್ಷಿ, ದೂರ ಸರಿದರು, ಉತ್ತರಕಾಂಡ, ಯಾನ, ಮಂದ್ರ, ತಂತು ಸೇರಿ ಎಲ್ಲಾ ಕಾದಂಬರಿಗಳು ಒಂದಕ್ಕೊಂದು ಭಿನ್ನವಾಗಿವೆ. ಬರೆದಂತೆ ಬದುಕಿದವರು ಭೈರಪ್ಪ ಎಂದರು.
ಹಾಸನದಲ್ಲಿ ಹಮಿಕೊಂಡಿದ್ದ ಹೊಯ್ಸಳ ಸಾಹಿತ್ಯೋತ್ಸವವನ್ನು ಉದ್ಘಾಟಿಸಿ ಎರಡು ದಿನ ಜಿಲ್ಲೆಯಲ್ಲಿ ಇದ್ದಿದ್ದು ಸರಣೀಯ. ಅವರನ್ನು ಕಳೆದುಕೊಂಡು ಸಾಹಿತ್ಯ ವಲಯ ನಷ್ಟ ಕಂಡಿದೆ. ಅವರ ಆತ ನಿಶ್ಚಿತವಾಗಿ ಶಾಂತವಾಗಿದೆ ಎಂದರು.

ಪತ್ರಕರ್ತ ಮಂಜು ಬನವಾಸೆ ಅವರು ಮಾತನಾಡಿ, ಸಾಹಿತಿ ಎಸ್‌‍.ಎಲ್‌. ಭೈರಪ್ಪ ಅವರು ಲೇಖನಿ ಮೂಲಕ ಸಾಧನೆ ಮಾಡಿದ್ದಾರೆ. ಆಧುನಿಕ ತಂತ್ರಜ್ಞಾನ ದಿನಗಳಲ್ಲಿ ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗಿದೆ ಎಂಬ ಚರ್ಚೆ ನಡುವೆಯೂ ತಮದೇಯಾದ ಓದುಗ ಬಳಗವನ್ನು ಭೈರಪ್ಪ ಹೊಂದಿದ್ದರು. ಪತ್ರಕರ್ತನಾಗಿ ಅವರ ಸಂದರ್ಶನ ಮಾಡುವ ಅವಕಾಶ ನನಗೆ ಸಿಕ್ಕಿತ್ತು. ಮೇರು ಸಾಹಿತಿಯ ಅಗಲಿಕೆ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವುಂಟು ಮಾಡಿದೆ ಎಂದು ಹೇಳಿದರು. ಕನ್ನಡಪರ ಹೋರಾಟಗಾರ ಬಾಳ್ಳುಗೋಪಾಲ್‌ ಅವರು ಮಾತನಾಡಿ, ಸಮಾಜದಲ್ಲಿ ಬೇರೂರಿರುವ ಜಾತಿ ಪದ್ಧತಿ ಕುರಿತು ಬರೆದಿರುವ ದಾಟು ಕಾದಂಬರಿ ನನ್ನ ಜೀವನದ ಮೇಲೆ ಗಾಢ ಪರಿಣಾಮ ಬೀರಿದೆ. ಅವರ ಪುಸ್ತಕಗಳ ವಿಮರ್ಶೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಅವರು ನಮ್ಮ ಜಿಲ್ಲೆಯವರು ಎನ್ನುವುದು ಹೆಮ್ಮೆಯ ವಿಚಾರವೆಂದರು.

ಲೇಖಕರಾದ ಗೊರೂರು ಅನಂತರಾಜು, ಸುವರ್ಣ ಶಿವಪ್ರಸಾದ್‌, ಸುಂದ್ರೇಶ್‌ ಮತ್ತಿತರರು ಮಾತನಾಡಿದರು. ಅಂತಾರಾಷ್ಟ್ರೀಯ ಚಿತ್ರಕಲಾವಿದ ಕೆ.ಟಿ. ಶಿವಪ್ರಸಾದ್‌, ಜಾವಗಲ್‌ ಪ್ರಸನ್ನ, ಕಸಾಪ ಸಂಘಟನಾ ಕಾರ್ಯದರ್ಶಿಗಳಾದ ಹೆಚ್‌.ಎನ್‌. ಚಂದ್ರಶೇಖರ್‌, ಆರ್‌.ಬಿ. ಶಂಕರ್‌, ಜ್ಞಾನದೀಕ್ಷ ಪ್ಯಾರಾ ಮೆಡಿಕಲ್‌ ಕಾಲೇಜಿನ ಕಾರ್ಯದರ್ಶಿ ನಂದನ್‌,ಜಿಲ್ಲಾ ಸರ್ಕಾರಿ ನೌಕರರ ಸಂಘದ ಕ್ರೀಡಾ ಕಾರ್ಯದರ್ಶಿ ಆಶಾ, ಶಿಕ್ಷಕಿ ಕುಸುಮ ಇತರರು ಹಾಜರಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಕಾರ್ಯದರ್ಶಿ ಬಿ.ಆರ್‌. ಬೊಮ್ಮೆಗೌಡ ಕಾರ್ಯಕ್ರಮ ನಿರೂಪಿಸಿದರು.

error: Content is protected !!