ಅರಸೀಕೆರೆ : ನಗರದ ಹಳೇ ಸರ್ಕಾರಿ ಮಾಧ್ಯಮಿಕ ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸದ ಶ್ರೇಯಸ್ ಪಟೇಲ್ ಭಾಗವಹಿಸಿ, ಮಹನೀಯರ ಆದರ್ಶಗಳನ್ನು ಸ್ಮರಿಸಿದರು. ಶ್ರೀ ಭಕ್ತ ಕನಕದಾಸರ 538ನೇ ಅದ್ದೂರಿ ಜಯಂತಿ ಮಹೋತ್ಸವ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರವರ ಕಂಚಿನ ಪುತ್ಥಳಿ ನಿರ್ಮಾಣದ ಗುದ್ದಲಿ ಪೂಜೆ ಕಾರ್ಯಕ್ರಮಗಳು ಏಕಕಾಲದಲ್ಲಿ ನಡೆದವು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಶ್ರೇಯಸ್ ಪಟೇಲ್, ಸಮಾಜಕ್ಕೆ ಕನಕದಾಸರು ಮತ್ತು ಸಂಗೊಳ್ಳಿ ರಾಯಣ್ಣ ಅವರ ಕೊಡುಗೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಭಕ್ತ ಕನಕದಾಸರ ಜಯಂತ್ಯುತ್ಸವದ ಕುರಿತು ಮಾತನಾಡಿದ ಶ್ರೇಯಸ್ ಪಟೇಲ್, “ಸಮಾಜ ಜಾಗೃತಿ, ಸಮಾನತೆ ಮತ್ತು ನೈತಿಕ ಮೌಲ್ಯಗಳ ಸಂದೇಶವನ್ನು ಕನ್ನಡ ನಾಡಿಗೆ ನೀಡಿದ ಮಹಾನ್ ಭಕ್ತ ಕನಕದಾಸರ ಆದರ್ಶಗಳು ನಮ್ಮನ್ನು ಸನ್ಮಾರ್ಗದತ್ತ ದಾರಿದೀಪದಂತೆ ನಡೆಸುತ್ತಿವೆ. ಅವರ ತತ್ವಾದರ್ಶಗಳನ್ನು ಪಾಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ,” ಎಂದು ಅಭಿಪ್ರಾಯಪಟ್ಟರು.
“ಬ್ರಿಟಿಷರ ವಿರುದ್ಧ ಅಸಾಮಾನ್ಯ ಸಾಹಸ ಪ್ರದರ್ಶಿಸಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ ಅಜರಾಮರ ಹೋರಾಟ ನಮ್ಮಲ್ಲಿ ಶೌರ್ಯ, ದೇಶಭಕ್ತಿ ಮತ್ತು ನಿಸ್ವಾರ್ಥ ಸೇವೆಯ ಸ್ಫೂರ್ತಿಯನ್ನು ತುಂಬುತ್ತದೆ. ಅವರ ತ್ಯಾಗ ಮತ್ತು ಬಲಿದಾನ ನಮ್ಮ ದೇಶಪ್ರೇಮದ ಪ್ರತೀಕ,” ಎಂದು ತಿಳಿಸಿದರು.
ಈ ಇಬ್ಬರೂ ಮಹನೀಯರ ತತ್ವಾದರ್ಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಂಡು ಒಳ್ಳೆಯ ಬದುಕು ಕಟ್ಟಿಕೊಳ್ಳೋಣ ಎಂಬ ಆಶಯವನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ನಾಯಕರು, ಸಮುದಾಯದ ಮುಖಂಡರು ಹಾಗೂ ಅಪಾರ ಸಂಖ್ಯೆಯ ಜನರು ಭಾಗವಹಿಸಿದ್ದರು.










