ಹಾಸನ: ಕೆಲಸ ಮಾಡಿರುವವರು ಬಂದರೆ ಮಾತನಾಡಬಹುದು, ಕೆಲಸ ಮಾಡದೇ ಸುಮ್ಮನೆ ಓಡಾಡಿಕೊಂಡು ಬರುವವರ ಬಗ್ಗೆ ನಾನೇನು ಮಾತನಾಡಲಿ ಎಂದು ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಸ್ಪರ್ಧೆಗೆ ಸಂಸದ ಪ್ರಜ್ವಲ್ ರೇವಣ್ಣ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.
ಹಾಸನದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಬಗ್ಗೆ ನಾನು ಮಾತನಾಡುವುದಿಲ್ಲ ಎಂದರು.
ಮಂಡ್ಯ, ಕೋಲಾರದಿಂದ ಯಾರು ಸ್ಪರ್ಧಿಸುತ್ತಾರೆ ಎನ್ನುವ ಮಾಹಿತಿ ಇಲ್ಲ, ಕುಮಾರಣ್ಣ ಸ್ಪರ್ಧಿಸಿದರೆ ಒಳ್ಳೆಯದೇ ಆಗುತ್ತೆ. ಕುಮಾರಸ್ವಾಮಿ ಕಣಕ್ಕಿಳಿದರೆ ಹಳೇಮೈಸೂರು ಭಾಗದಲ್ಲಿ ಒಂದು ಅಲೆ ಎದ್ದೇಳುತ್ತದೆ. ಅವರು ನಿಂತರೆ ನಮಗೆ ಒಳ್ಳೆಯದೇ ಆಗುತ್ತೆ. ಕುಮಾರಣ್ಣ ಸ್ಪರ್ಧೆಯನ್ನು ಸ್ವಾಗತ ಮಾಡುತ್ತೇನೆ ಎಂದರು.
ನಾನೂ ಐದು ವರ್ಷದಲ್ಲಿ ಎಲ್ಲಾ ಭಾಗಕ್ಕೂ ಹೋಗಿದ್ದೀನಿ, ಎಲ್ಲಾ ಕಡೆ ಚೆನ್ನಾಗಿದೆ. ಒಳ್ಳೆಯ ವಿಶ್ವಾಸ ಇದೆ. ಎರಡೂ ಪಕ್ಷದ ಕಾರ್ಯಕರ್ತರು ಹುಮ್ಮಸ್ಸಿನಲ್ಲಿದ್ದಾರೆ. ನಾನು ಖಂಡಿತವಾಗಿಯೂ ಒಳ್ಳೆಯ ಲೀಡ್‌ನಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಗೆಲ್ತೀನಿ ಎಂದು ಭರವಸೆ ವ್ಯಕ್ತಪಡಿಸಿದರು.
ನನಗೆ ಬಂದಿರುವ ಮಾಹಿತಿ ಪ್ರಕಾರ ಭಾನುವಾರ ಅಥವಾ ಸೋಮವಾರ ಬಿಜೆಪಿ-ಜೆಡಿಎಸ್ ಟಿಕೆಟ್ ಅನೌನ್ಸ್ ಮಾಡ್ತಾರೆ. ಇನ್ನೆರಡ್ಮೂರು ದಿನಗಳಲ್ಲಿ ಕರ್ನಾಟಕ ರಾಜ್ಯದ ಎಲ್ಲಾ ಲೋಕಸಭಾ ಕ್ಷೇತ್ರಗಳ ಟಿಕೆಟ್‌ಗಳನ್ನು ಘೋಷಣೆ ಮಾಡ್ತಾರೆ.
ಜೆಡಿಎಸ್‌ಗೆ ಎಷ್ಟು ಟಿಕೆಟ್ ಕೊಡಬೇಕು ಎಂದು ಎರಡೂ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತೆ. ಟಿಕೆಟ್ ಕೊಟ್ಟ ಮೇಲೆ ಕೆಲಸ ಮಾಡೋಣ.
ಈಗಾಗಲೇ ಒಂದು ರೌಂಡ್ ಎಲ್ಲಾ ಪಂಚಾಯಿತಿಗೆ ಹೋಗಿದ್ದೀನಿ, ಹಳ್ಳಿಗಳಿಗೆ ಭೇಟಿ ನೀಡಿದ್ದೀನಿ. ಒಂದು ರೌಂಡ್ ಕ್ಯಾನ್ವಾಸ್ ಕೂಡ ಆಗಿದೆ. ಏನಾದರೂ ಸರಿಪಡಿಸಿಕೊಳ್ಳುವುದಿದ್ದರೆ ಸರಿಪಡಿಸಿಕೊಳ್ತಿನಿ ಎಂದರು.
ನಾವು ಎಲ್ಲರ ಜತೆ ಟಚ್‌ನಲ್ಲಿ ಇದ್ದೀನಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡ್ತಾ ಇದ್ದೀನಿ. ನಿನ್ನೆಯೂ ಕೂಡ ಬಿಜೆಪಿ ನಾಯಕರು ಕರೆ ಮಾಡಿದ್ರು. ಐದು ವರ್ಷ ಸಂಸದನಾಗಿ ಒಳ್ಳೆಯ ಅನುಭವ ನೀಡಿದೆ. ಎಲ್ಲಾ ಕಡೆ ಹೋಗಲು ಆಗಲ್ಲ, ಆದರೂ ಬಹುತೇಕ ಭೇಟಿ ನೀಡಿ ಕೆಲಸ ಮಾಡಿದ್ದೀನಿ. ರೈತರಿಗೆ, ಸಾರ್ವಜನಿಕರಿಗೆ ಅನ್ಯಾಯವಾಗದ ರೀತಿ ಕೆಲಸ ಮಾಡಿದ್ದೀನಿ.
ಐದು ವರ್ಷ ವಿಶೇಷವಾದ ಅನುಭವವಾಗಿದೆ. ಎಲ್ಲರೂ ಬಹಳಷ್ಟು ಅನುಭವ ಕೊಟ್ಟಿದ್ದಾರೆ. ಮುಂದೆಯೂ ಒಳ್ಳೆಯ ಕೆಲಸ ಮಾಡುತ್ತೇನೆ ಎಂದರು.










