ಸಕಲೇಶಪುರ : ತಾಲೂಕು ಹಿಂದೂತ್ವದ ಕುರಿತು ಹೆಚ್ಚಿನ ಜಾಗೃತಿ ಹೊಂದಿರುವುದು ಸಂತೋಷದ ವಿಷಯವಾಗಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಪಟ್ಟಣದಲ್ಲಿ ಹಿಂದೂ ಹಿತ ರಕ್ಷಣಾ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ದತ್ತ ಪೀಠ ಚಲೋ ಕಾರ್ಯಕ್ರಮದ ಅಂಗವಾಗಿ ಕೇಸರಿ ಬಾವುಟ ತೋರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಮಾತನಾಡಿ, ಸಕಲೇಶಪುರ ಹಿಂದುತ್ವದ ತವರೂರಾಗಿರುವುದು ಸಂತೋಷದ ವಿಷಯ, ರಘುಜೀ ಸೇರಿದಂತೆ ಅನೇಕ ಹಿಂದೂ ಕಾರ್ಯಕರ್ತರು ದತ್ತಪೀಠ ಹೋರಾಟದಲ್ಲಿ ನಿರಂತರವಾಗಿ ಭಾಗಿಯಾಗಿದ್ದಾರೆ.
ದತ್ತ ಪೀಠ ಹೋರಾಟದಲ್ಲಿ ಕೇವಲ ಒಂದು ಹಂತಕ್ಕೆ ಮಾತ್ರ ನಮಗೆ ಗೆಲುವು ಸಿಕ್ಕಿದೆ. ದತ್ತ ಪೀಠದ ಸಂಪೂರ್ಣ ಗೆಲುವಿಗಾಗಿ ಮತ್ತಷ್ಟು ಹೋರಾಟದ ಅವಶ್ಯಕತೆ ಇದೆ. ನಮ್ಮ ತಾಲೂಕಿನಲ್ಲಿ ಹಿಂದೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆ ಯಲ್ಲಿ ಇರುವುದು ನನಗೆ ಬಹಳ ಖುಷಿ ತರುತ್ತದೆ. ದೇಶ, ರಾಷ್ಟ್ರೀಯತೆ, ಸಂಸ್ಕೃತಿ ಉಳಿಯಬೇಕಾದಲ್ಲಿ ಒಗ್ಗಟ್ಟಿನ ಹೋರಾಟ ಅವಶ್ಯಕತೆ ಇದೆ. ಹೀಗಾಗಿ ನಾವೆಲ್ಲಾ ಒಗ್ಗಟ್ಟಿನಿಂದ ಸಂಘಟನೆ ಮಾಡಬೇಕಾಗಿದೆ.
ದತ್ತ ಪೀಠಕ್ಕೆ ಮಹಿಳೆಯರು ಹಾಗೂ ಮಕ್ಕಳು ಸಹ ಹೊರಟಿರುವುದು ಸಂತೋಷದ ವಿಷಯ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ನಡೆದ ಹೋರಾಟದಲ್ಲಿ ಅನೇಕ ಮಂದಿ ಜೀವ ಬಲಿದಾನ ಮಾಡಿದ್ದಾರೆ. ನಿರಂತರ ಹೋರಾಟದ ಪರಿಣಾಮ ಹಾಗೂ ಪ್ರಧಾನಿ ನರೇಂದ್ರ ಮೋದಿರವರ ಇಚ್ಛಾಶಕ್ತಿಯಿಂದಾಗಿ ಇಂದು ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗಿದೆ. ಇದೇ ರೀತಿ ದತ್ತ ಪೀಠವನ್ನು ನಮ್ಮ ವಶಕ್ಕೆ ಪಡೆಯಲು ಒಗ್ಗಟ್ಟಿನ ಹೋರಾಟ ಅವಶ್ಯಕತೆ ಇದೆ.
ಹಿಂದೂ ಹಿತ ರಕ್ಷಣಾ ವೇದಿಕೆ ಮುಖಂಡ ಕೌಶಿಕ್ ಮಾತನಾಡಿ, ಸಂಘಟನೆ ವತಿಯಿಂದ ಪ್ರತಿ ವರ್ಷ 1000 ಕ್ಕೂ ಹೆಚ್ಚು ಮಂದಿ ದತ್ತ ಪೀಠಕ್ಕೆ ತೆರಳುತ್ತಿದ್ದು ಈ ಬಾರಿಯು ಸಹ ಅತಿ ಹೆಚ್ಚಿನ ಸಂಖ್ಯೆ ಯಲ್ಲಿ ದತ್ತ ಪೀಠಕ್ಕೆ ತೆರಳಲಾಗುತ್ತಿದೆ ಎಂದರು.
ಆರಕ್ಷಕ ವೃತ್ತ ನಿರೀಕ್ಷಕ ಬಿ. ಕೆ ಪಾಟೀಲ್ ಮಾತನಾಡಿ, ದತ್ತ ಮಾಲಾ ದಾರಿಗಳು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅನ್ಯ ಧರ್ಮದವರ ವಿರುದ್ಧ ಯಾವುದೇ ಘೋಷಣೆ ಕೂಗಬಾರದು ಎಲ್ಲಿ ಬೇಕೆಂದರಲ್ಲಿ ಇಳಿದು ನೃತ್ಯ ಮಾಡಬಾರದು. ಶಾಂತಿಯುತ ವಾಗಿ ಪೀಠಕ್ಕೆ ತೆರಳಿ ಹಿಂತಿರುಗಬೇಕೆಂದು ಹೇಳಿದರು.
ಈ ಸಂಧರ್ಭದಲ್ಲಿ ಹಿಂದೂ ಹಿತ ರಕ್ಷಣಾ ವೇದಿಕೆ ಮುಖಂಡರುಗಳಾದ ಧರ್ಮೇಶ್, ದುಷ್ಯಂತ್ ಗೌಡ, ಶಿವು ಜಿಪ್ಪಿ, ಮಂಜು ಕಬ್ಬಿನಗದ್ದೆ, ಪ್ರದೀಪ್, ಶ್ರೀಜಿತ್ ಸೇರಿದಂತೆ ಇತರರು ಹಾಜರಿದ್ದರು.










