ಹಾಸನ: ಸಕಲೇಶಪುರ, ಆಲೂರು ವಿಧಾನಸಭಾ ಕ್ಷೇತ್ರದ ಕಟ್ಟಾಯ ಹೋಬಳಿ ವ್ಯಾಪ್ತಿಯ ಹಳ್ಳಿಗಳಲ್ಲಿ ಸೋಮವಾರ ವಿವಿಧ ಕಾಮಗಾರಿಗಳಿಗೆ ಶಾಸಕ ಸಿಮೆಂಟ್ ಮಂಜು ಶಂಕುಸ್ಥಾಪನೆ ನೆರವೇರಿಸಿದರು.
ಚನ್ನಂಗಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಳ್ಳಿ ಕೊಪ್ಪಲು, ಕಿತ್ತಾನೆ ರಸ್ತೆ, ಲಕ್ಕ ನಾಯಕನಹಳ್ಳಿ, ಚನ್ನಂಗಿಹಳ್ಳಿ, ಹುಲಿಹಳ್ಳಿ, ಚಿಕ್ಕಬಾಣಗೆರೆ ಹಾಗೂ ಬಾಚಿಹಳ್ಳಿ ಬಸವೇಶ್ವರ ದೇವಸ್ಥಾನದ ಕಾಂಪೌಂಡ್ ನಿರ್ಮಾಣ. ಕಟ್ಟಾಯ ಹೋಬಳಿಯ ಬ್ಯಾಡರಹಳ್ಳಿ ಕಾಲೋನಿ, ಶಂಕರನಹಳ್ಳಿ ಪಂಚಾಯಿತಿ, ಮಲ್ಲಪನಹಳ್ಳಿ, ಮತ್ತು ಶೆಟ್ಟಿಹಳ್ಳಿ ಗ್ರಾ.ಪಂ ವ್ಯಾಪ್ತಿಯ ಕಲ್ಹಹಳ್ಳಿ ವ್ಯಾಪ್ತಿಯಲ್ಲಿ ಕಾಂಕ್ರೀಟ್ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಅಭಿವೃದ್ಧಿ ಕಾಮಗಾರಿಗೆಂದು ಸರ್ಕಾರ ಒದಗಿಸುವ ಅನುದಾನದ ಹಣವನ್ನು ಬಳಸಿಕೊಂಡು ಸಂಬಂಧಿತ ಇಲಾಖೆಯ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ನಿಗದಿತ ಕಾಲ ಮಿತಿಯಲ್ಲಿ ಅಭಿವೃದ್ಧಿ ಕೆಲಸವನ್ನು ಅನುಷ್ಟಾನಕ್ಕೆ ತರಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಸರ್ಕಾರ ನೀಡುವ ಅನುದಾನಕ್ಕೆ ಆಯಾ ಇಲಾಖೆಯು ನೀಡುವ ಮಾರ್ಗ ಸೂಚಿಯಂತೆ ಅಭಿವೃದ್ಧಿ ಕಾಮಗಾರಿ ಮುಗಿಸಲು ಕಾಲಮಿತಿಯ ಗಡುವು ನೀಡುತ್ತದೆ.
ಅದನ್ನು ಗಮನಿಸಿ ಅಧಿಕಾರಿಗಳು ಅನುದಾನ ಸದುಪಯೋಗಕ್ಕೆ ತ್ವರಿತ ಕ್ರಮ ಕೈಗೊಳ್ಳಬೇಕು. ಗುಣಮಟ್ಟದ ಕಾಮಗಾರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಕಳಪೆ ಕಾಮಗಾರಿ ಎಂಬ ಆರೋಪ ಕೇಳಿ ಬರಬಾರದು. ಇದರ ಬಗ್ಗೆ ಗಮನಹರಿಸಬೇಕು ಎಂದು ಅವರು ತಿಳಿಸಿದರು.
ಅನುದಾನ ತರುವುದು ಜನಪ್ರತಿನಿಧಿಯ ಕೆಲಸವಾದರೆ ಅದನ್ನು ಉಪಯೋಗಿಸಿಕೊಂಡು ಕೆಲಸ ಮಾಡುವುದು ಅಧಿಕಾರಿಗಳ ಕೆಲಸ. ಪರಸ್ಪರ ಸಮನ್ವಯತೆಯಿಂದ ಜನ ಪರವಾಗಿ ಕೆಲಸ ಮಾಡಿದಾಗ ಮಾತ್ರ ಅಭಿವೃದ್ಧಿ ಕಾಮಗಾರಿ ನಡೆದು ಜನರಿಗೆ ಮೂಲಸೌಲಭ್ಯ ನೀಡಲು ಸಾಧ್ಯವಾಗುತ್ತದೆ.
ಇದನ್ನು ಅಧಿಕಾರಿಗಳು ಮರೆಯದೆ ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ತಮ್ಮ ಕರ್ತವ್ಯ ನಿರ್ವಹಣೆಗೆ ಮುಂದಾಗಬೇಕು ಎಂದು ಅವರು ಸಲಹೆ ನೀಡಿದರು.
ಈ ಸಂಧರ್ಭದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಬಿಜೆಪಿ ಮುಖಂಡರು ಗ್ರಾಮಸ್ಥರು ಉಪಸ್ಥಿತರಿದ್ದರು.










