ಹಾಸನ: ಉರ್ದು ಭಾಷೆ ಜನಸಾಮಾನ್ಯರ ಭಾಷೆ; ಅಕಾಡೆಮಿಗೆ ಹೆಚ್ಚಿನ ಅನುದಾನ ಅಗತ್ಯ – ಮೌಲಾನ ಮುಫ್ತಿ ಮೊಹಮ್ಮದ್ ಆಲಿ ಖಾಜಿ

Maulana Mufti Mohammad Ali Qazi, President of the Karnataka State Urdu Academy, said that Urdu is not just the language of Muslims, it is the language of the common people.

ಹಾಸನ : ಉರ್ದು ಭಾಷೆ ಕೇವಲ ಮುಸ್ಲಿಂರ ಭಾಷೆ ಅಲ್ಲ ಅದು ಜನ ಸಾಮಾನ್ಯರ ಭಾಷೆಯಾಗಿದೆ ಎಂದು ಕರ್ನಾಟಕ ರಾಜ್ಯ ಉರ್ದು ಅಕಾಡೆಮಿ ಅಧ್ಯಕ್ಷ ಮೌಲಾನ ಮುಫ್ತಿ ಮೊಹಮ್ಮದ್ ಆಲಿ ಖಾಜಿ ಹೇಳಿದರು.

ನಗರದ ತಾಜ್ ಕನ್ವೆನ್ಷನ್ ಭವನದಲ್ಲಿ ಕರ್ನಾಟಕ ಉರ್ದು ಅಕಾಡೆಮಿ ವತಿಯಿಂದ ಆಯೋಜಿಸಲಾಗಿದ್ದ ಉರ್ದು ಕವಿ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಉರ್ದು ಅಕಾಡೆಮಿಗೆ ಸರ್ಕಾರ ನೀಡುತ್ತಿರುವ ಅನುದಾನ ಅತ್ಯಂತ ಕಡಿಮೆ ಇದೆ. ಸರ್ಕಾರ ಪ್ರತಿ ವರ್ಷ ಕೇವಲ 2 ಕೋಟಿ ರೂ. ಗಳನ್ನು ಅಕಾಡೆಮಿಗೆ ನೀಡುತಿದ್ದು ಇದರಿಂದ ಹೆಚ್ಚಿನ ಕಾರ್ಯಕ್ರಮಗಳನ್ನು ಆಯೋಜಿಸಲು ಅನುದಾನ ಸಾಕಾಗುತ್ತಿಲ್ಲ. ದಾನಿಗಳ ನೆರವಿನಿಂದ ಸಣ್ಣ ಪುಟ್ಟ ಕಾರ್ಯಕ್ರಮಗಳನ್ನು ಅಕಾಡೆಮಿ ವತಿಯಿಂದ ಮಾಡಲಾಗುತ್ತಿದೆ.

ಈ ಸರ್ಕಾರ ಇತ್ತ ಗಮನಹರಿಸಿ ಉರ್ದು ಅಕಾಡೆಮಿಗೆ ಹೆಚ್ಚಿನ ಅನುದಾನವನ್ನು ನೀಡಲು ಮುಂದಾಗಬೇಕು. ಅಕಾಡೆಮಿಗೆ ಹೆಚ್ಚಿನ ಅನುದಾನ ದೊರೆತರೆ ತಾಲೂಕು ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲು ಸಾಧ್ಯವಾಗುತ್ತದೆ. ಇದರಿಂದ ಭಾಷೆಯ ಬೆಳವಣಿಗೆ ಸಾಧ್ಯ ಎಂದರು.

ಮುಖ್ಯ ಅತಿಥಿಯಾಗಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಹಾಗೂ ಜನಮಿತ್ರ ಪತ್ರಿಕೆಯ ಸಂಪಾದಕ ಮದನ್ ಗೌಡ ಮಾತನಾಡಿ, ಭಾಷೆಯ ಮತ್ತು ಕಾವ್ಯಕ್ಕೆ ಯಾವುದೇ ಮತ್ಸರವಿಲ್ಲ, ಸಾಹಿತ್ಯ ಗಡಿ ಇಲ್ಲ ಮತ್ತು ಮುಶಾಯೆರಾಗಳಲ್ಲಿ ಕಾವ್ಯ ವಾಚನ ಮಾಡುವಾಗ ಸತ್ಯ ಸಂಗತಿಗಳು ಹೊರಬರುತ್ತವೆ. ಭಾಷೆಯ ಬೆಳವಣಿಗೆಗೆ ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಉರ್ದು ಶಾಲೆಗಳಿಗೆ ಮಕ್ಕಳನ್ನು ದಾಖಲಾತಿ ಮಾಡುವುದು ಕಡಿಮೆ ಆಗುತ್ತಿರುವುದು ಕಂಡು ಬರುತ್ತಿದೆ. ಇದರಿಂದ ಹಲವು ಉರ್ದು ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಆಗಿ ಶಾಲಾ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದೆ. ಹೀಗಾಗಿ ಉರ್ದು ಶಾಲೆಗಳಿಗೆ ಮಕ್ಕಳನ್ನು ದಾಖಲಾತಿ ಮಾಡಲು ಪೋಷಕರು ಮುಂದಾಗಬೇಕು.

ಉರ್ದು ಕವಿಗೋಷ್ಠಿಗಳು ಪ್ರತಿ ತಾಲೂಕು ಮಟ್ಟದಲ್ಲಿ ನಡೆಯ ಬೇಕು, ಆಗ ಮಾತ್ರ ಭಾಷೆಯ ಬೆಳವಣಿಗೆ ಸಾಧ್ಯ ಎಂದರು.

ಈ ಸಂದರ್ಭದಲ್ಲಿ ಡೈಲಿ ಸಾಲರ್ ಪತ್ರಿಕೆಯ ಜಿಲ್ಲಾ ವರದಿಗಾರ ಹಾಗೂ ಹಾಸನ ಜಿಲ್ಲಾ ಪತ್ರಕರ್ತರ ಸಂಘದ ನಿರ್ದೇಶಕ ಜಮೀಲ್ ಅಹಮ್ಮದ್ ಹಾಗೂ ಸರ್ಕಾರಿ ಶಾಲೆಯ ಶಿಕ್ಷಕಿ ಮುಬೀನಾ ಕೌಸರ್ ರವರನ್ನು ಅಕಾಡೆಮಿ ವತಿಯಿಂದ ಸನ್ಮಾನಿಸಲಾಯಿತು. ರಾಜ್ಯ, ಹೊರ ರಾಜ್ಯ ಹಾಗೂ ಜಿಲ್ಲೆಯ ಹಲವಾರು ಕವಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಅಖಿಲ ಭಾರತ ಮುಶಾಯೆರಾ ರಾತ್ರಿ 10:00 ಕ್ಕೆ ಆರಂಭವಾಗಿ ನಸುಕಿನ ಜಾವ 3:00 ರ ತನಕ ನಡೆಯಿತು, ಮುಶಾಯೆರಾದ ಸಾಹಿತ್ಯ ಅಭಿಮಾನಿಗಳು ಚಳಿಯು ಅನ್ನದೆ ಶಾಯೆರಿಗಳ ಲೋಕದಲ್ಲಿ ತೇಲಿ ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾದರು. ಈ ಸಂದರ್ಭದಲ್ಲಿ ಉರ್ದು ಅಕಾಡೆಮಿಯ ಜಿಲ್ಲಾ ಮುಖಂಡರುಗಳಾದ ಅನ್ವರ್ ಖಾನ್ ಅನ್ವರ್, ಡಾ. ಅಖ್ತರ್ ಸೈಯ್ಯದಾ ಖಾನಮ್, ಸಯ್ಯದ್ ಸಜ್ಜದ್ ಪಾಷಾ, ಅತಿಕ್ ಉರ್ ರೆಹಮಾನ್, ಕಾರ್ಯದರ್ಶಿ ನಿಜಾಮುದ್ದೀನ್ ಶಾದಾಬ್, ಸೈಯದ್ ತಾಜ್, ಜಲೀಲ್ ಅಹ್ಮದ್, ಮೊಹ್ಮದ್ ಇಸಾಖ್, ಇಬ್ರಾಹಿಂ, ಆಜಾಂ ಖಾನ್. ಅಬ್ದುಲ್ ಮಾಜಿದ್ ಸೇರಿದಂತೆ ಇತರರು ಹಾಜರಿದ್ದರು.

ಮುಶಾಯಿರಾದಲ್ಲಿ ದೇಶದ ವಿವಿಧ ರಾಜ್ಯಗಳಿಂದ ಆಗಮಸಿದ ಖ್ಯಾತ ಕವಿಗಳು ಕಾವ್ಯ ವಾಚನ ಮಾಡಿದರು, ಪ್ರಮುಖವಾಗಿ ಮುನೀರ್ ಅಹ್ಮದ್ ಜಾಯ್ (ಬೆಂಗಳೂರು), ಡಾ. ಫರ್ಜಾನಾ ಫರಾಹ್ (ಭಟ್ಕಳ), ಇಬ್ರಾಹಿಂ ಸಾಗರ್ ಹಾಗೂ ಇರ್ಷಾದ್ ಅಂಜುಮ್ (ಮಹಾರಾಷ್ಟ್ರ), ರೇಷ್ಮಾ ತಲತ್ ಶಬ್ನಮ್ (ಕೋಲಾರ), ಜನಾಬ್ ನುಸ್ರತ್ ರಹೀಮ್ (ಚಿಕ್ಕಮಗಳೂರು), ಸೈಯದ್ ಕಬೀರ್ ಅಹ್ಮದ್ ಕಬೀರ್ (ಹಾಸನ), ತಾಲಿಬ್ ಶೋಲಾಪುರಿ (ಮಹಾರಾಷ್ಟ್ರ), ರಫೀಕ್ ಸರ್ವರ್ (ಮಾಲೆಗಾಂವ್), ಜಹೀರ್ ಕಾನ್‌ಪುರಿ (ಉತ್ತರ ಪ್ರದೇಶ), ರಹಮತುಲ್ಲಾ ರಹಮತ್ (ಶಿವಮೊಗ್ಗ), ಅಲ್ತಾಫ್ ಝಿಯಾ (ಮಾಲೆಗಾಂವ್), ಆಲಂ ನಿಜಾಮಿ ಜಮೀಯತಿ, ಸಾಕಿಬ್ ಜುನೈದಿ (ಕಾಂಚಿ), ಅಹ್ಮದ್ ಬಾಷಾ ಸಾಗರ್ (ಬಾಗಲಕೋಟೆ) ಹಾಗೂ ಲುತ್ಫುಲ್ಲಾ ಮಸ್ರೂರ್ ದಾವಿ (ಹಾಸನ) ಇವರುಗಳ ಕಾವ್ಯಗಳು ಪ್ರಮುಖವಾಗಿದ್ದವು.

Maulana Mufti Mohammad Ali Qazi, President of the Karnataka State Urdu Academy, said that Urdu is not just the language of Muslims, it is the language of the common people.