ಸಕಲೇಶಪುರ: ಪೂರ್ಣಚಂದ್ರ ತೇಜಸ್ವಿ ಸಾಂಸ್ಕೃತಿಕ ಕೇಂದ್ರದಲ್ಲಿ ‘ಮಂತ್ರಮಾಂಗಲ್ಯ’ ಅಪ್ಪಿ ಅಜ್ಜಿಯ ಮೊಮ್ಮಗಳ ಸರಳ ವಿವಾಹ ಮನಸೆಳೆದ ಕ್ಷಣಗಳು

ಸಕಲೇಶಪುರದ ಮಾಜಿ ಶಾಸಕ ಹೆಚ್.ಎಂ. ವಿಶ್ವನಾಥ್ ಅವರು ವಧು–ವರರಿಗೆ ವಿವಾಹ ಪ್ರಮಾಣವಚನ ಬೋಧಿಸಿದರು.

ಸಕಲೇಶಪುರ: ರಕ್ಷಿದಿಯ ಪೂರ್ಣಚಂದ್ರ ತೇಜಸ್ವಿ ಸಾಂಸ್ಕೃತಿಕ ಕೇಂದ್ರದಲ್ಲಿ ಭಾನುವಾರ ಕುವೆಂಪು ಆದರ್ಶದ  ಮಂತ್ರಮಾಂಗಲ್ಯ ಸರಳ ವಿವಾಹದ ಮೂಲಕ  ಸಕಲೇಶಪುರ ತಾಲೂಕಿನ ಹಿರಿಯ ಜೀವ ಅಪ್ಪಿ ಅಜ್ಜಿ ಅವರ ಮೊಮ್ಮಗಳು ಮೋನಿಕಾ ಹಾಗೂ ಬಾಗೆಯ ಎ. ಮಂಜುನಾಥ್  ಸತಿ-ಪತಿಗಳಾದರು.

ಮೋನಿಕಾ ಪಿಯುಸಿ  ವಿದ್ಯಾಭ್ಯಾಸ ಮಾಡಿದ್ದು, ವರ ಮಂಜುನಾಥ್ ಐಟಿಐ ಶಿಕ್ಷಣ ಪಡೆದಿದ್ದಾರೆ. ಹೋರಾಟದ ಬದುಕು ಕಂಡ ಅಪ್ಪಿ ಅಜ್ಜಿ ಕುಟುಂಬದ ಹಿನ್ನೆಲೆ ಈ ವಿವಾಹಕ್ಕೆ ವಿಶೇಷ ಅರ್ಥವನ್ನು ನೀಡಿತು.

ಅಪ್ಪಿ ಅಜ್ಜಿಯ ಪುತ್ರ ಕೃಷ್ಣಪ್ಪ ಅಕಾಲಿಕವಾಗಿ ನಿಧನರಾಗಿದ್ದರೂ, ಕುಟುಂಬದ ಮೇಲೆ ಅವರ ಸಂಸ್ಕಾರ ಮತ್ತು ಮೌಲ್ಯಗಳು ಮುಂದುವರಿದಿವೆ. ಕೃಷ್ಣಪ್ಪ ಅವರ ಪುತ್ರ ಚೇತನ್ ಸಹ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾನೆ.

ಮೊಮ್ಮಗಳ ಮದುವೆಯನ್ನು ಪೂರ್ಣಚಂದ್ರ ತೇಜಸ್ವಿ ರಂಗಮಂದಿರದಲ್ಲೇ ನಡೆಸಬೇಕು ಎಂಬ ಅಪ್ಪಿ ಅಜ್ಜಿಯ ಆಸೆಯನ್ನು ಕುಟುಂಬಸ್ಥರು ಗೌರವಿಸಿ, ಸರಳತೆ ಮತ್ತು ಮೌಲ್ಯಾಧಾರಿತ ಮಂತ್ರಮಾಂಗಲ್ಯ ವಿವಾಹವನ್ನು ಆಯೋಜಿಸಿದರು. ಜೈ ಕರ್ನಾಟಕ ಸಂಘದ ಸದಸ್ಯರು, ಗ್ರಾಮಸ್ಥರು ಹಾಗೂ ಬಂಧುಮಿತ್ರರ ಸಮ್ಮುಖದಲ್ಲಿ ಸಮಾರಂಭ ನಡೆಯಿತು.

ಸಕಲೇಶಪುರ ಕ್ಷೇತ್ರದ ಮಾಜಿ ಶಾಸಕ ಹೆಚ್.ಎಂ. ವಿಶ್ವನಾಥ್ ಅವರು ವಧು–ವರರಿಗೆ ವಿವಾಹ ಪ್ರಮಾಣವಚನ ಬೋಧಿಸಿದರು. ವಧು–ವರರ ತಂದೆತಾಯಿಯರೊಂದಿಗೆ, ವಿವಾಹಕ್ಕೆ ಪ್ರಮುಖ ಕಾರಣರಾದ ಅಪ್ಪಿ ಅಜ್ಜಿಯನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಸಮಾರಂಭಕ್ಕೆ ಆಗಮಿಸಿದ ಅತಿಥಿಗಳಿಗೆ ಸಂಕ್ರಾಂತಿ ಹಬ್ಬದ ಅಂಗವಾಗಿ ಎಳ್ಳು–ಬೆಲ್ಲ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಪತ್ರಕರ್ತ ಅರುಣ್ ರಕ್ಷಿದಿ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ರಂಗನಾಥ್, ಬಿಜೆಪಿ ಮುಖಂಡ ರಾಜ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.