ಮಂಡ್ಯ : ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ದಳವಾಯಿ ಕೋಡಿಹಳ್ಳಿಯಲ್ಲಿ ಪಕ್ಕದ ಮನೆಯ ವ್ಯಕ್ತಿಯ ನಿರಂತರ ಬೆದರಿಕೆ ಹಾಗೂ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ಮಗಳು ಮತ್ತು ತಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿದೆ. ಗ್ರಾಮದ ಪ್ರಿಯಾಂಕ (19) ಹಾಗೂ ಆಕೆಯ ತಾಯಿ ಶಕುಂತಲಾದೇವಿ (46) ಮೃತರು.
ಪ್ರಿಯಾಂಕಳ ಮದುವೆಗೆ ಕುಟುಂಬಸ್ಥರು ಸಿದ್ಧತೆ ನಡೆಸುತ್ತಿದ್ದು, ಇದೇ ವಿಚಾರವೇ ದುರಂತಕ್ಕೆ ಕಾರಣವಾಗಿದೆ ಎನ್ನಲಾಗಿದೆ. ತನಗೆ ಈಗಾಗಲೇ ಮದುವೆಯಾಗಿ ಮಕ್ಕಳಿದ್ದರೂ ಪಕ್ಕದ ಮನೆಯಾತ ಪ್ರಿಯಾಂಕಳ ಮೇಲೆ ಕಣ್ಣು ಹಾಕಿದ್ದು, ಆಕೆ ಬೇರೆಯವರ ಜೊತೆ ಮದುವೆಯಾಗುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದನು. ತನ್ನ ಜೊತೆಯಲ್ಲೇ ಪ್ರಿಯಾಂಕಳ ಮದುವೆ ನಡೆಯಬೇಕೆಂದು ಪಟ್ಟು ಹಿಡಿದಿದ್ದ ಆತ, ಕುಟುಂಬ ಒಪ್ಪದ ಕಾರಣದಿಂದ ಬೆದರಿಕೆ ಹಾಕುತ್ತಿದ್ದನು ಎಂಬ ಆರೋಪ ಕೇಳಿಬಂದಿದೆ.
ಎರಡು ದಿನಗಳ ಹಿಂದೆ ಆ ವ್ಯಕ್ತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದನು. ಈ ಆತ್ಮಹತ್ಯೆ ಯತ್ನಕ್ಕೆ ತಮ್ಮನ್ನೇ ಹೊಣೆ ಮಾಡುವ ಸಾಧ್ಯತೆ ಇದೆ ಎಂಬ ಭಯ, ಸಾಮಾಜಿಕ ಮರ್ಯಾದೆ ಮತ್ತು ಮಾನಸಿಕ ಒತ್ತಡಕ್ಕೆ ಒಳಗಾದ ಪ್ರಿಯಾಂಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಮಗಳ ಮೃತದೇಹವನ್ನು ಕಂಡ ತಾಯಿ ಶಕುಂತಲಾದೇವಿ, ಕುಟುಂಬದ ಗೌರವಕ್ಕೆ ಅಂಜಿ ತಾನೂ ನೇಣಿಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಮಾಹಿತಿ ಪಡೆದ ಹಲಗೂರು ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ನೆರೆ ಮನೆಯ ವ್ಯಕ್ತಿಯ ಪಾತ್ರದ ಕುರಿತು ತನಿಖೆ ಮುಂದುವರಿಸಿದ್ದಾರೆ. ಗ್ರಾಮದಲ್ಲಿ ಘಟನೆಗೆ ತೀವ್ರ ಆಘಾತ ವ್ಯಕ್ತವಾಗಿದ್ದು, ಮೃತರ ಕುಟುಂಬಕ್ಕೆ ಸಾಂತ್ವನದ ಅಲೆ ಹರಿದಿದೆ.










