ಹಾಸನ (kannadapost.com): “ಭಕ್ತಿ ಮತ್ತು ಶಕ್ತಿಯ ಮಹಾಸಂಗಮವೇ ಮಾಡಾಳು ಮೂಲಸ್ಥಾನ ಶ್ರೀ ಸ್ವರ್ಣ ಗೌರಮ್ಮ ದೇವಿ ನೆಲೆಸಿರುವ ಈ ಪವಿತ್ರ ಸನ್ನಿಧಿ,” ಎಂದು ಹಾರನಹಳ್ಳಿ ಸುಕ್ಷೇತ್ರ ಕೋಡಿಮಠದ ಜಗದ್ಗುರು ಡಾ. ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಬಣ್ಣಿಸಿದ್ದಾರೆ.
ಕಳೆದ 167 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಈ ಸುಕ್ಷೇತ್ರದಲ್ಲಿ, ಭಾದ್ರಪದ ಮಾಸದ ತದಿಗೆಯಂದು ಪ್ರತಿಷ್ಠಾಪಿಸಲಾಗಿರುವ ಅಮ್ಮನವರಿಗೆ ಸಂಪ್ರದಾಯದಂತೆ 10ನೇ ದಿನದ ‘ದೊಡ್ಡ ಮಂಗಳಾರತಿ’ (ಮಹಾ ಮಂಗಳಾರತಿ) ಸೇವೆಯು ಬುಧವಾರ ರಾತ್ರಿ ಕೋಡಿಮಠದ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಅತ್ಯಂತ ಶ್ರದ್ಧಾಭಕ್ತಿಯಿಂದ ಸಂಪನ್ನಗೊಂಡಿತು.
ಕೋಡಿಮಠ ಮತ್ತು ಮಾಡಾಳಿನ ಅವಿನಾಭಾವ ಸಂಬಂಧ:
ಶ್ರೀಗಳ ಪಾದಪೂಜೆಯ ನಂತರ ಗೌರಿದೇವಿಯನ್ನು ಆಶೀರ್ವದಿಸಿದ ಸ್ವಾಮೀಜಿ, ನೆರೆದಿದ್ದ ಭಕ್ತರನ್ನು ಉದ್ದೇಶಿಸಿ ಆಶೀರ್ವಚನ ನೀಡಿದರು. “ಮಾಡಾಳಿಗೂ ಮತ್ತು ಕೋಡಿಮಠಕ್ಕೂ ಅವಿನಾಭಾವ ಸಂಬಂಧವಿದೆ. ಕೋಡಿಮಠದಲ್ಲಿ ಯೋಗ ಸಮಾಧಿಯಲ್ಲಿರುವ ಮಹಾ ತಪಸ್ವಿ ಶಿವಲಿಂಗ ಸ್ವಾಮಿಗಳವರು ಒಂದು ಕೋಟಿ ಜಪ ಮಾಡಿ ಸಿದ್ಧಿಸಿದ ‘ಬಂಗಾರದ ಮೂಗುತಿ’ಯನ್ನು ಗೌರಿ ಹಬ್ಬದಂದು ದೇವಿಗೆ ಧಾರಣೆ ಮಾಡಿದ ಬಳಿಕ, ಆಕೆ ಸಾಕ್ಷಾತ್ ಪಾರ್ವತಿ ದೇವಿಯಾಗಿ ಕಂಗೊಳಿಸುತ್ತಾಳೆ,” ಎಂದು ವಿವರಿಸಿದರು.
”ಅಮ್ಮನವರು ತನ್ನ ನಂಬಿ ಬರುವ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾ, ಸಂಕಷ್ಟಗಳನ್ನು ಪರಿಹರಿಸುತ್ತಾ ಬಂದಿದ್ದಾಳೆ. ಆದ್ದರಿಂದಲೇ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಪ್ರಮುಖ ಶಕ್ತಿಪೀಠಗಳ ಸಾಲಿನಲ್ಲಿ ಇದೂ ಕೂಡ ಮತ್ತೊಂದು ಬೃಹತ್ ‘ಶಕ್ತಿಪೀಠ’ವಾಗಿ ಬೆಳೆಯಲಿದೆ,” ಎಂದು ಸ್ವಾಮೀಜಿ ವಿಶ್ವಾಸ ವ್ಯಕ್ತಪಡಿಸಿದರು.
ಫಲಹಾರದ ಕುಕ್ಕೆ ಉತ್ಸವ ಹಾಗೂ ಮಹಾಮಂಗಳಾರತಿ:
ಇದಕ್ಕೂ ಮುನ್ನ ಕೋಡಿಮಠದ ಉತ್ತರಾಧಿಕಾರಿ ಚೇತನ್ ಮರಿದೇವರು ಮೂಲ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದರು. ಬಳಿಕ ಭಕ್ತರು ಫಲಹಾರದ ಕುಕ್ಕೆಗಳನ್ನು ಹೊತ್ತು, ಮಂಗಳ ಕರಡೆ ವಾದ್ಯದೊಂದಿಗೆ ನೂರಾರು ಭಕ್ತರೊಡಗೂಡಿ ಉತ್ಸವದಲ್ಲಿ ಗೌರಮ್ಮ ದೇವಾಲಯಕ್ಕೆ ಆಗಮಿಸಿದರು. ರಾತ್ರಿ 9 ಗಂಟೆಗೆ ಸರಿಯಾಗಿ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ, ದೇವಾಲಯದ ಪದ್ಧತಿಯಂತೆ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಕರ್ಪೂರದ ಮಹಾಮಂಗಳಾರತಿ ಬೆಳಗಲಾಯಿತು.
ಈ ಪುಣ್ಯ ಕಾರ್ಯಕ್ರಮದಲ್ಲಿ ಕೋಡಿಮಠದ ಚೇತನ್ ಮರಿದೇವರು, ಗೊಲ್ಲಹಳ್ಳಿ ವಿದ್ಯಾಶಂಕರ ದೇಸಿಕೇಂದ್ರ ಸ್ವಾಮೀಜಿ, ಐನಳ್ಳಿ ಪ್ರಶಾಂತ್ ದೇವರು, ಬಿಜೆಪಿ ಮುಖಂಡ ಸಿದ್ದೇಶ್ ನಾಗೇಂದ್ರ, ನಿವೃತ್ತ ಡಿಐಜಿ ಜ್ಯೋತಿಪ್ರಕಾಶ್ ಮಿರ್ಜಿ ಹಾಗೂ ಉದ್ಯಮಿ ಗಣೇಶ್ ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು.












