ಮಾಡಾಳು ಮೂಲಸ್ಥಾನ ಸ್ವರ್ಣಗೌರಮ್ಮ ದೇವಾಲಯದಲ್ಲಿ ಆ.16, 17ರಂದು ಶಿಲಾ ದೇವಾಲಯದ ಪ್ರಾರಂಭೋತ್ಸವ, ಕಳಸಾರೋಹಣ

  • ಮಾಡಾಳು ಮೂಲಸ್ಥಾನ ಸ್ವರ್ಣಗೌರಮ್ಮ ದೇವಿ ದೇವಾಲಯದಲ್ಲಿ ಆ.16 ಮತ್ತು 17ರಂದು ನೂತನ ಶಿಲಾ ದೇವಾಲಯದ ಪ್ರಾರಂಭೋತ್ಸವ ಹಾಗೂ ಕಳಸಾರೋಹಣ ನಡೆಯಲಿದೆ.

ಮಾಡಾಳು: ರಾಜ್ಯದಲ್ಲಿಯೇ ಇತಿಹಾಸ ಪ್ರಸಿದ್ಧ ಪುಣ್ಯಕ್ಷೇತ್ರವೆಂದು ಹೆಸರಾಗಿರುವ ಮಾಡಾಳು ಗ್ರಾಮದ ಮೂಲಸ್ಥಾನ ಸ್ವರ್ಣಗೌರಮ್ಮ ದೇವಿ ದೇವಾಲಯದ ಆವರಣದಲ್ಲಿ ಕೋಡಿಮಠ ಮಹಾಸಂಸ್ಥಾನದ ವತಿಯಿಂದ ನೂತನವಾಗಿ ನಿರ್ಮಿಸಿರುವ ಶಿಲಾ ದೇವಾಲಯದ ಪ್ರಾರಂಭೋತ್ಸವ ಹಾಗೂ ಕಳಸಾರೋಹಣ ಕಾರ್ಯಕ್ರಮ ಆ.16 ಮತ್ತು 17ರಂದು ನಡೆಯಲಿದೆ.

ಹಾರನಹಳ್ಳಿ ಕೋಡಿಮಠದ ಜಗದ್ಗುರು ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರ ಸಾನಿಧ್ಯದಲ್ಲಿ ಎರಡು ದಿನಗಳ ಕಾಲ ವಿವಿಧ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಕಾರ್ಯಕ್ರಮಗಳು ನಡೆಯಲಿದ್ದು, ನೂರಾರು ಭಕ್ತರು ಭಾಗವಹಿಸಲಿದ್ದಾರೆ ಎಂದು ಸ್ವರ್ಣಗೌರಮ್ಮ ದೇವಿ ಸೇವಾ ಸಮಿತಿ ಅಧ್ಯಕ್ಷ ಎಂ.ಎಸ್. ನಟರಾಜ್ ತಿಳಿಸಿದ್ದಾರೆ.

ದೇವಾಲಯದ ಆವರಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾರನಹಳ್ಳಿ ಸುಕ್ಷೇತ್ರ ಕೋಡಿಮಠದ ಜಗದ್ಗುರು ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರ ಅಪ್ಪಣೆಯಂತೆ ಹಾಗೂ ಶ್ರೀಗಳ ಸಾನಿಧ್ಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಆ.16ರಂದು ದೇವರುಗಳ ಆಗಮನ, ಉತ್ಸವ

ಆ.16ರಂದು ಮಾಡಾಳು ಗ್ರಾಮದ ಸುತ್ತಮುತ್ತಲಿನ 20ಕ್ಕೂ ಹೆಚ್ಚು ಗ್ರಾಮಗಳ ದೇವರುಗಳ ಆಗಮನವಾಗಲಿದೆ. ಅಂದು ಸಂಜೆ 4 ಗಂಟೆಗೆ ಗ್ರಾಮದ ಮೂಲ ಸನ್ನಿಧಿಯಲ್ಲಿ ಮುತ್ತೈದೆಯರು ಗಂಗಾ ಪೂಜೆ ನೆರವೇರಿಸಲಿದ್ದಾರೆ. ಬಳಿಕ ಗ್ರಾಮದ ಆರಾಧ್ಯ ದೈವ ಶ್ರೀ ಗುರು ಚನ್ನಬಸವೇಶ್ವರ ಸ್ವಾಮಿಯವರ ಸಮ್ಮುಖದಲ್ಲಿ ಕೆರೆ ಏರಿಯ ಮೇಲಿರುವ ದೇವಾಲಯಕ್ಕೆ ಕುಂಭಗಳೊಂದಿಗೆ ತೆರಳಲಾಗುವುದು ಎಂದು ತಿಳಿಸಿದರು.

ನಂತರ ಮಂಗಲ ಕರಡಿ ವಾದ್ಯಗಳೊಂದಿಗೆ ನೂರಾರು ಭಕ್ತರ ಸಮ್ಮುಖದಲ್ಲಿ ದೇವರುಗಳ ಉತ್ಸವ ನಡೆಯಲಿದ್ದು, ಭಕ್ತರೊಂದಿಗೆ ದೇವರುಗಳನ್ನು ಮೂಲಸ್ಥಾನ ಸ್ವರ್ಣಗೌರಮ್ಮ ದೇವಾಲಯಕ್ಕೆ ಕರೆತರಲಾಗುವುದು.

ದೇವಾಲಯದ ಮುಂಭಾಗ ಸಿದ್ಧಪಡಿಸಿರುವ ಪುಷ್ಪಾಲಂಕೃತ ವೇದಿಕೆಯಲ್ಲಿ ಆಗಮಿಸುವ ಎಲ್ಲಾ ದೇವರುಗಳನ್ನು ಕೂರಿಸಲಾಗುವುದು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಭಕ್ತಾದಿಗಳಿಗೆ ದಾಸೋಹದ ವ್ಯವಸ್ಥೆ ಮಾಡಲಾಗಿದೆ ಎಂದು ಎಂ.ಎಸ್. ನಟರಾಜ್ ತಿಳಿಸಿದರು.

ಆ.17ರಂದು ಹೋಮ, ಹವನ, ಕಳಸಾರೋಹಣ

ಆ.17ರಂದು ದೇವಾಲಯದ ಮುಂಭಾಗ ಪುರೋಹಿತರ ತಂಡದಿಂದ ಹವನ, ಹೋಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿವೆ.

ಅಂದು ಬೆಳಗ್ಗೆ 10 ಗಂಟೆಗೆ ಕೆಬಿದರೆ ದೊಡ್ಡಮಟ್ಟದ ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿಯವರು ನೂತನ ಶಿಖರಕ್ಕೆ ಕಳಸಾರೋಹಣ ನೆರವೇರಿಸಲಿದ್ದು, ನೂರಾರು ಭಕ್ತರ ಜಯಘೋಷದ ನಡುವೆ ಗೋಪುರದ ಮೇಲೆ ಕಳಸವನ್ನು ಪ್ರತಿಷ್ಠಾಪಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕೋಡಿಮಠದ ಉತ್ತರಾಧಿಕಾರಿ ಚೇತನ್ ಮರಿದೇವರು ಹಾಗೂ ಮಾಡಾಳು ನಿರಂಜನ ಪೀಠದ ಶ್ರೀ ರುದ್ರಮುನಿ ಸ್ವಾಮೀಜಿಯವರು ಉಪಸ್ಥಿತರಿರಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಕೋಡಿಮಠದ ಏಜೆಂಟ್ ಎಚ್.ಸಿ. ಮಹದೇವಪ್ಪ ಉಪಸ್ಥಿತರಿದ್ದರು.