ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್ ಹಾಗೂ ಅಮೃತಾ ಅಯ್ಯಂಗಾರ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಕಿರುತೆರೆಗೆ
ಬೆಂಗಳೂರು,ಜೂನ್ 18(www.kannadapost.com): ಪ್ರತಿ ವರ್ಗದ ಪ್ರೇಕ್ಷಕರಿಗೂ ಮನಸ್ಸಿಗೆ ಹತ್ತಿರವಾಗುವ ಕಥೆಗಳನ್ನು ನೀಡುತ್ತಾ ಬಂದಿರುವ ಜೀ ಕನ್ನಡ, ತನ್ನ ವಾರಾಂತ್ಯದ ಸಿನಿಮಾ ಮನರಂಜನೆಯನ್ನು ಮತ್ತಷ್ಟು ರಂಗೇರಿಸಲು ಸಜ್ಜಾಗಿದೆ. ಕನ್ನಡದ ಸೂಪರ್ಹಿಟ್ ‘ಲವ್ ಮಾಕ್ಟೇಲ್’ ಸರಣಿಯ ಬಹು ನಿರೀಕ್ಷಿತ ಅಂತಿಮ ಭಾಗವಾದ ‘ಲವ್ ಮಾಕ್ಟೇಲ್ 3’ ಚಿತ್ರದ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಜೂನ್ 21ರಂದು ಸಂಜೆ 4:30ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.
‘ಲವ್ ಮಾಕ್ಟೇಲ್ 2’ ಚಿತ್ರದ ನಂತರ ಹಲವು ವರ್ಷಗಳ ಬಳಿಕ ತೆರೆಕಂಡಿರುವ ಈ ಚಿತ್ರದಲ್ಲಿ ತಂದೆಯ ಪ್ರೀತಿ, ಕುಟುಂಬದ ಒಡನಾಟ, ಜವಾಬ್ದಾರಿ ಹಾಗೂ ಯಾವುದೇ ಪರಿಸ್ಥಿತಿಯಲ್ಲೂ ಜೊತೆಯಾಗಿ ನಿಲ್ಲುವ ಕೌಟುಂಬಿಕ ಮೌಲ್ಯಗಳನ್ನು ಮನಮುಟ್ಟುವ ರೀತಿಯಲ್ಲಿ ಚಿತ್ರಿಸಲಾಗಿದೆ.
ರಕ್ತ ಸಂಬಂಧಕ್ಕಿಂತ ಮಿಗಿಲಾದುದು ಪ್ರೀತಿ ಮತ್ತು ಬಾಂಧವ್ಯ ಎಂಬ ಸಂದೇಶವನ್ನು ಸಾರುವ ಈ ಚಿತ್ರ, ಭಾವನೆಗಳ ಹಲವು ಪದರಗಳನ್ನು ಒಳಗೊಂಡಿದೆ. ಪ್ರೀತಿ, ನೋವು, ಸಂಬಂಧಗಳು ಹಾಗೂ ಜೀವನದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಕುಟುಂಬದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಚಿತ್ರದಲ್ಲಿ ಸೂಕ್ಷ್ಮವಾಗಿ ತೆರೆದಿಡಲಾಗಿದೆ.
ತಾರಾಗಣ
ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿರುವ ಈ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಸಂವೃತಾ ಸುನಿಲ್, ರೇಚಲ್ ಡೇವಿಡ್, ಅಮೃತಾ ಅಯ್ಯಂಗಾರ್, ದಿಲೀಪ್ ರಾಜ್ ಹಾಗೂ ಶ್ವೇತಾ ಆರ್. ಪ್ರಸಾದ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಚಿತ್ರದ ಕಥೆ
ಚಿತ್ರದ ನಾಯಕ ಆದಿತ್ಯ ಅಲಿಯಾಸ್ ಆದಿ (ಡಾರ್ಲಿಂಗ್ ಕೃಷ್ಣ) ದತ್ತು ಪಡೆದ ಮಗಳು ನಿಧಿಯನ್ನು ತನ್ನ ಸ್ವಂತ ಮಗಳಂತೆ ಪ್ರೀತಿಯಿಂದ ಸಾಕುತ್ತಿರುತ್ತಾನೆ. ಆದಿ ಮತ್ತು ನಿಧಿಯ ಬದುಕು ಅಪ್ಪ-ಮಗಳ ಬಾಂಧವ್ಯ, ಸಂತೋಷದ ಕ್ಷಣಗಳು ಮತ್ತು ಸುಂದರ ನೆನಪುಗಳಿಂದ ಕೂಡಿರುತ್ತದೆ.
ಕೇರ್ಟೇಕರ್ ಜಗ್ಗಾ ಮಮ್ಮಿ ಹಾಗೂ ಆತ್ಮೀಯ ಸ್ನೇಹಿತ ವಿಜಯ್ ಅವರ ಬೆಂಬಲ ಸದಾ ಇವರ ಜೊತೆಗಿರುತ್ತದೆ. ಆದರೆ ಡಾ. ಶಾಂತಾ ಅವರು ನಿಧಿ ತನ್ನ ಮೊಮ್ಮಗಳು ಎಂದು ಹೇಳಿಕೊಂಡು ಬಂದಾಗ ಆದಿ ಮತ್ತು ನಿಧಿಯ ಜೀವನದಲ್ಲಿ ದೊಡ್ಡ ತಿರುವು ಉಂಟಾಗುತ್ತದೆ.
ಅಲ್ಲಿಂದ ಆರಂಭವಾಗುವ ಕಾನೂನು ಹೋರಾಟ ಮತ್ತು ಭಾವನಾತ್ಮಕ ಸಂಘರ್ಷ, ಆದಿಯ ಬದುಕನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ. ಪ್ರೀತಿಯಿಂದ ಕಟ್ಟಿಕೊಂಡಿರುವ ತನ್ನ ಕುಟುಂಬವನ್ನು ಉಳಿಸಿಕೊಳ್ಳಲು ಆದಿ ನಡೆಸುವ ಹೋರಾಟ ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ.
ತಾನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಮಗಳು ನಿಧಿಯಿಂದ ದೂರವಾಗುವ ಪರಿಸ್ಥಿತಿಯನ್ನು ಆದಿ ಹೇಗೆ ಎದುರಿಸುತ್ತಾನೆ? ತನ್ನ ಕುಟುಂಬವನ್ನು ಉಳಿಸಿಕೊಳ್ಳಲು ನಡೆಸುವ ಹೋರಾಟ ಯಶಸ್ವಿಯಾಗುತ್ತದೆಯೇ? ಎಂಬ ಪ್ರಶ್ನೆಗಳಿಗೆ ಉತ್ತರ ‘ಲವ್ ಮಾಕ್ಟೇಲ್ 3’ ಚಿತ್ರದಲ್ಲಿ ಸಿಗಲಿದೆ.
ಪ್ರೇಕ್ಷಕರು ಈ ಭಾವನಾತ್ಮಕ ಕಥೆಯನ್ನು ಜೂನ್ 21ರಂದು ಸಂಜೆ 4:30ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ವೀಕ್ಷಿಸಬಹುದು.











