ಬೇಲೂರು: ಬಾಬರ್ ಆಲಿ ಶಿಕ್ಷಣ ಲ್ಯಾಬ್ ಉದ್ಘಾಟನೆ – ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಸಂದೇಶ

ಬೇಲೂರು: ಪ್ರಸಿದ್ಧ ಶಿಕ್ಷಣ ತಜ್ಞರು, ಪಶ್ಚಿಮ ಬಂಗಾಳದ ಬಾಬರ್ ಆಲಿ ಪಟ್ಟಣದ ಬಿಜಿಎಸ್ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಶಿಕ್ಷಣ ಲ್ಯಾಬ್ ಉದ್ಘಾಟಿಸಿದರು. ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಭಾಗಿಯಾಗಿ ಮಾತನಾಡಿ, ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರು, ಅಬ್ದುಲ್ ಕಲಾಂ ಮುಂತಾದ ಮಹನೀಯರ ಪ್ರೇರಣೆ ಪಡೆದಾಗಲೇ ತಮ್ಮ ಕನಸು ನನಸು ಮಾಡಿಕೊಳ್ಳಲು ಸಾಧ್ಯ ಎಂದರು.

ಕಷ್ಟಪಟ್ಟು ಓದಿದರೆ ಯಶಸ್ಸಿನ ಹಾದಿ ಸುಗಮವಾಗುತ್ತದೆ. ವಿಫಲತೆಗೆ ಹೆದರಬೇಡಿ, ಅದು ಯಶಸ್ಸಿನ ಮೆಟ್ಟಿಲು ಎಂದು ಸಲಹೆ ನೀಡಿದ ಅವರು, ತಮ್ಮ ಜೀವನದ ಅನುಭವ ಹಂಚಿಕೊಂಡರು.ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯ ಗುರುತಿಸಿಕೊಂಡು ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಬೇಕು. ಪ್ರತಿಯೊಬ್ಬರೂ ತಮ್ಮ ಗುರಿ ಸ್ಪಷ್ಟವಾಗಿ ಇಟ್ಟುಕೊಳ್ಳಬೇಕು. ಗುರಿ ಇಲ್ಲದೆ ಬದುಕು ಸಾಗಿದರೆ ಜೀವನಕ್ಕೆ ಅರ್ಥವಿಲ್ಲ. ಕನಸು ಕಾಣಬೇಕು, ಆ ಕನಸ ಸಾಕಾರಗೊಳಿಸಲು ಪ್ರತಿದಿನ ಪರಿಶ್ರಮಿಸಬೇಕು ಎಂದು ಕರೆ ನೀಡಿದರು.

ಸಮಾಜದಲ್ಲಿ ಬಡತನ, ಅಸಮಾನತೆ, ಅಜ್ಞಾನ ಇವುಗಳನ್ನು ದೂರ ಮಾಡಲು ವಿದ್ಯಾರ್ಥಿಗಳು ಓದಿದ ಜ್ಞಾನವನ್ನು ಸಮಾಜ ಸೇವೆಗೆ ಬಳಸಬೇಕು. ಕೇವಲ ಅಂಕ ಗಳಿಸುವುದಕ್ಕಾಗಿ ಕಲಿಯ ಬೇಡಿ ಬದುಕನ್ನು ರೂಪಿಸುವುದಕ್ಕಾಗಿ ಕಲಿಯಿರಿ.

ಭಾರತ ಯುವಜನರ ದೇಶ. ಈ ಯುವಜನರು ಸೃಜನಶೀಲತೆ ಬೆಳೆಸಿಕೊಂಡರೆ, ನವೀನ ಆವಿಷ್ಕಾರ ಮಾಡಿದರೆ, ದೇಶವು ವಿಶ್ವದ ಶ್ರೇಷ್ಠ ರಾಷ್ಟ್ರವಾಗುವುದು ಖಚಿತ. ಅದಕ್ಕೆ ನಿಮ್ಮ ಪರಿಶ್ರಮ, ನೈತಿಕತೆ ಮತ್ತು ಶಿಸ್ತು ಮುಖ್ಯ ಎಂದರು.

ನಂತರ ಮಾತನಾಡಿದ ಕಸಾಪ ಪ್ರಧಾನ ಕಾರ್ಯದರ್ಶಿ ಬಿ.ಬಿ. ಶಿವರಾಜ್, ಪರಮಪೂಜ್ಯರಾದ ಬಾಲ ಗಂಗಾಧರನಾಥ ಸ್ವಾಮೀಜಿ ಅವರು,ಗ್ರಾಮೀಣ ಪ್ರದೇಶದ ಮಕ್ಕಳು ಉತ್ತಮ ವಿದ್ಯಾವಂತರಾಗಬೇಕೆಂದು ಈ ಸಂಸ್ಥೆ ಸ್ಥಾಪಿಸುತ್ತಿದ್ದು, ವಿದ್ಯಾರ್ಥಿಗಳು ತಂದೆ-ತಾಯಿ ಮತ್ತು ಉಪನ್ಯಾಸಕರ ಕನಸುಗಳನ್ನು ಸಾಕಾರಗೊಳಿಸುವುದು ಪ್ರತಿಯೊಬ್ಬ ವಿದ್ಯಾರ್ಥಿಗಳ ಕರ್ತವ್ಯವಾಗಿದೆ.

ವಿದ್ಯಾರ್ಥಿಗಳು ಶಿಕ್ಷಣದ ಜೊತೆ ಸುಸಂಸ್ಕೃತ ಮತ್ತು ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ದೇಶದ ಉತ್ತಮ ಪ್ರಜೆಗಳಾಗಿ ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಿ ಬೆಳೆಯಬೇಕು. ಸರ್ ಎಂ.ವಿಶ್ವೇಶ್ವರಯ್ಯ ಅವರು ನೂರು ವರ್ಷಗಳ ಹಿಂದೆ ದೇಶ ಯಾವ ರೀತಿ ಇರಬೇಕು, ಭದ್ರತೆ ವ್ಯವಸ್ಥೆ ಹೇಗಿರ ಬೇಕೆಂದು ಆಲೋಚಿಸಿ ಪುಸ್ತಕ ಬರೆದಿದ್ದಾರೆ. ವಿದ್ಯಾರ್ಥಿಗಳು ಕೂಡ ದೊಡ್ಡ, ಒಳ್ಳೆಯ ಗುರಿ ಇಟ್ಟುಕೊಂಡು ಗುರಿ ಸಾಧಿಸಲು ಮುಂದಾಗಬೇಕು. ನಿಮ್ಮ ಸಮಯ ವ್ಯರ್ಥ ಮಾಡಬೇಡಿ. ಪ್ರತಿದಿನ ಕನಿಷ್ಠ ಒಂದು ಪುಟ ಒಳ್ಳೆಯ ಪುಸ್ತಕ ಓದಿದರೆ ನಿಮ್ಮ ಜೀವನದ ದಿಕ್ಕು ಬದಲಾಗುತ್ತದೆ.

ಮೊಬೈಲ್, ಟಿವಿ, ವ್ಯರ್ಥ ವ್ಯವಹಾರಗಳಿಗೆ ಸಮಯ ಕೊಡುವುದನ್ನು ಕಡಿಮೆ ಮಾಡುವಂತೆ ಮನವಿ ಮಾಡಿದರು. ಪ್ರಾಂಶುಪಾಲ ದಿವ್ಯಕುಮಾರ್ ಮಾತನಾಡಿದರು. ಈ ವೇಳೆ ವಿದ್ಯಾಸಂಸ್ಥೆಯಿಂದ ಬಾಬರ್ ಆಲಿ ಅವರನ್ನು ಅಭಿನಂಧಿಸಲಾಯಿತು. ಈ ವೇಳೆ ಆಂಗ್ಲ ಭಾಷೆ ಉಪನ್ಯಾಸಕ ಚಂದ್ರಶೇಖರ್, ರವಿಕುಮಾರ್, ಮೊರಾರ್ಜಿ ಶಾಲೆ ಪ್ರಾಂಶುಪಾಲ ಸತೀಶ್ ಹಾಗೂ ಉಪನ್ಯಾಸಕ ವೃಂದ, ವಿದ್ಯಾರ್ಥಿಗಳು ಹಾಜರಿದ್ದರು.