ಕೊಪ್ಪಳ: ಜನವರಿ 5. ರಂದು ನಡೆದ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಯ ರಥೋತ್ಸವಕ್ಕೆ ಸುಮಾರು 6 ಲಕ್ಷಕ್ಕೂ ಅಧಿಕ ಭಕ್ತರು ಸಾಕ್ಷಿಯಾದರು. ಕಳೆದ ನಾಲ್ಕು ದಿನಗಳಿಂದ ಗವಿಮಠದಲ್ಲಿ ನಡೆದ ಗವಿಸಿದ್ದೇಶ್ವರ ಗದ್ದುಗೆ ದರ್ಶನ ಹಾಗೂ ಶ್ರೀಗಳ ಆಶೀರ್ವಾದ ಪಡೆದ ಭಕ್ತರ ಸಂಖ್ಯೆ ಸುಮಾರು 16ರಿಂದ 17 ಲಕ್ಷದವರೆಗೆ ತಲುಪಿದೆ ಎಂದು ಅಂದಾಜಿಸಲಾಗಿದೆ.
ಈ ಬಾರಿ ಜಾತ್ರೆಯ ಮಹಾದಾಸೋಹಕ್ಕೆ ಭಕ್ತರಿಗಾಗಿ ವಿಶೇಷ ಸಿಹಿ ತಿನಿಸುಗಳನ್ನು ಸಮರ್ಪಿಸಲಾಗಿದ್ದು, ಅಜ್ಜನ ಜಾತ್ರೆಯಲ್ಲಿ ರೊಟ್ಟಿ, ಪಲ್ಯ, ಪುಡಿಗಳು, ಚಟ್ನಿ ಹಾಗೂ ವಿವಿಧ ಉಪ್ಪಿನಕಾಯಿಗಳು ಭಕ್ತರಿಗೆ ವಿಶೇಷ ಸವಿಯಾಗಿ ದೊರಕಿದವು. ಭಕ್ತರು ಅಪಾರ ಭಕ್ತಿಭಾವದಿಂದ ಮಹಾದಾಸೋಹಕ್ಕೆ ತಿನಿಸುಗಳನ್ನು ಅರ್ಪಿಸಿದ್ದು, ಈ ಬಾರಿಯೂ ದಾಖಲೆ ನಿರ್ಮಾಣವಾಗಿದೆ.
ಜಾತ್ರೆಯ ಮಹಾದಾಸೋಹಕ್ಕಾಗಿ ಭಕ್ತರು 19 ಲಕ್ಷ ರೊಟ್ಟಿ, 25 ಕ್ವಿಂಟಲ್ ಬುಂದಿ, 175 ಕ್ವಿಂಟಲ್ ಮೈಸೂರು ಪಾಕ್, 62 ಕ್ವಿಂಟಲ್ ಶೇಂಗಾ ಹೋಳಿಗೆ, 647 ಕ್ವಿಂಟಲ್ ಮಾದಲಿ, 5 ಕ್ವಿಂಟಲ್ ಜಿಲೇಬಿ, 7 ಕ್ವಿಂಟಲ್ ಖರ್ಚಿಕಾಯಿ, 5 ಕ್ವಿಂಟಲ್ ಶಂಕರಪೋಳಿ, 155 ಕ್ವಿಂಟಲ್ ಸೋನ್ ಪಾಪಡಿ, 8 ಕ್ವಿಂಟಲ್ ಕರದಂಟು, 1 ಕ್ವಿಂಟಲ್ ಬದಾಮಿ ಪುರಿ, 47 ಕ್ವಿಂಟಲ್ ರವೆ ಉಂಡಿ, 6 ಕ್ವಿಂಟಲ್ ಮಿರ್ಚಿ ಹಾಗೂ 5 ಕ್ವಿಂಟಲ್ ಅಪ್ಪಳವನ್ನು ಅರ್ಪಿಸಿದ್ದಾರೆ.
ಮಹಾಪ್ರಸಾದವು ಜನವರಿ 18ರವರೆಗೆ ನಡೆಯಲಿದ್ದು, ಲೆಕ್ಕಕ್ಕೆ ಸಿಗದಷ್ಟು ಅಕ್ಕಿ, ಬೇಳೆ, ಅಡುಗೆ ಎಣ್ಣೆ ಮತ್ತು ತರಕಾರಿಗಳನ್ನು ಭಕ್ತರು ಗವಿಸಿದ್ದಪ್ಪ ಅಜ್ಜನ ಜಾತ್ರೆಗೆ ಸಮರ್ಪಿಸಿ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ. ಹೆಸರು ಹೇಳದೇ ಬೀದಿಬದಿ ವ್ಯಾಪಾರ ಮಾಡುತ್ತಿದ್ದ ವೃದ್ಧೆಯೊಬ್ಬರು ಕೊತ್ತಂಬರಿ ಸೂಡುಗಳನ್ನು ನೀಡಿದ್ದು, ಕೊಪ್ಪಳ ಜೈಲಿನ ಖೈದಿಗಳು ಒಂದು ದಿನದ ಊಟದ ದವಸ ಧಾನ್ಯಗಳನ್ನು ಮಠಕ್ಕೆ ಅರ್ಪಿಸಿದ ಘಟನೆ ಎಲ್ಲರ ಮನ ಮುಟ್ಟಿದೆ.
ಈ ಭಕ್ತಿಭಾವವನ್ನು ಕಂಡು ಅಭಿನವ ಗವಿಸಿದ್ದೇಶ್ವರ ಶ್ರೀಗಳು ಭಾವುಕರಾಗಿ ಕಣ್ಣೀರಿಟ್ಟರು ಎನ್ನಲಾಗಿದೆ. ಕೊಪ್ಪಳ ಜಾತ್ರೆ ಅಂದ್ರೆ ಭಕ್ತರ ಜಾತ್ರೆ, ಭಕ್ತರೇ ನಡೆಸುವ ಜಾತ್ರೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.










