ಹಾಸನ: ರಾಜ್ಯದಲ್ಲಿ ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಅತಿವೃಷ್ಟಿಯಿಂದ ರೈತರಿಗಾಗಿರುವ ನಷ್ಟ ಭರಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಗಂಭೀರತೆ ಅರಿತು ಸ್ಪಂದಿಸಬೇಕು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪರಿಹಾರಕ್ಕಾಗಿ ಕಲಬುರಗಿ ವಿಭಾಗಗಳಲ್ಲಿ ಭಾರೀ ಪ್ರತಿಭಟನೆ ನಡೆಯುತ್ತಿವೆ. ಅತಿವೃಷ್ಟಿಯಿಂದ 15 ಲಕ್ಷ ಎಕರೆ ಬೆಳೆ ನಷ್ಟವಾಗಿದೆ. ಪರಿಹಾರಕ್ಕಾಗಿ ರಾಜ್ಯ, ಕೇಂದ್ರಕ್ಕೆ ಮನವಿ ಸಲ್ಲಿಸಿದೆ. ಆದರೆ ಈವರೆಗೂ ಯಾರೂ ಸ್ಪಂದಿಸಲ್ಲ, ಗಂಭೀರವಾಗಿ ಪರಿಗಣಿಸಿಲ್ಲ ಎಂದು ದೂರಿದರು.
2025 ರಲ್ಲಿ ತಲೆ ದೋರಿದ್ದ ಬರ ಹಿನ್ನೆಲೆ 36 ಸಾವಿರ ಕೋಟಿ ನಷ್ಟವಾಗಿದ್ದು, ಅದನ್ನು ಭರಿಸುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದಕ್ಕೆ ಕೇವಲ 430 ಕೋಟಿ ನೀಡಿತ್ತು. ರಾಜ್ಯದವರು 200 ಕೋಟಿ ಸೇರಿಸಿ ಪರಿಹಾರ ನೀಡಿದ್ದರು. ಆದರೆ ಈ ಬಾರಿ ಹಾಗಾಬಾರದು, ನಷ್ಟದ ಪ್ರಮಾಣ ಅಂದಾಜಿಸಿ, ಸರ್ವ ಸಮ್ಮತ ಪರಿಹಾರ ನೀಡಬೇಕು. ಉಭಯ ಸರ್ಕಾರಗಳು ಎಚ್ಚರಿಕೆಯಿಂದ ನಿಭಾಯಿಸಬೇಕು ಎಂದು ಮನವಿ ಮಾಡಿದರು.
ಮಹಾರಾಷ್ಟ್ರಕ್ಕೆ ನೀಡಿದಂತೆಯೇ ಕರ್ನಾಟಕಕ್ಕೂ ಕೇಂದ್ರ ಪರಿಹಾರ ನೀಡಬೇಕು. ಹಿಂದಿನ ತಪ್ಪುಗಳು ಮರುಕಳಿಸಬಾರದು. ಹಾಲಿ ಆಗಿರುವ ಬೆಳೆ ನಷ್ಟಕ್ಕೆ ಪರಹಾರ ಕೊಡಲು ಮೀನಾಮೇಷ ಕೊಡಲು ಹಿಂದೇಟು ಹಾಕದೆ ಕೂಡಲೇ ರೈತರ ತೆರವಿಗೆ ಬರಬೇಕು ಎಂದು ಆಗ್ರಹಿಸಿದರು.
ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೇಕೆದಾಟು ಯೋಜನೆ ಮಾಡುತ್ತೇವೆ ಎಂದರು, ಆದರೆ ಈವರೆಗೂ ಆಗಿಲ್ಲ ಎಂದ ಅವರು, ಸದ್ಯದಲ್ಲೇ ಕಾಡಾನೆ ಸಮಸ್ಯೆ ಕುರಿತು ಸಿಎಂ ಸಭೆ ನಡೆಸಲಿದ್ದು, ಅಂದಿನ ಸಭೆಯಲ್ಲಿ ಸಮಸ್ಯೆಯಿಂದ ಏನೆಲ್ಲ ತೊಂದರೆ ಆಗಿದೆ ಎಂಬುದನ್ನು ಮನವರಿಕೆ ಮಾಡುವೆ, ಆಹಾರ, ನೀರಿಲ್ಲದೆ ಕಾಡು ಪ್ರಾಣಿಗಳು ನಾಡಿಗೆ ಬರುತ್ತಿವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಬಾಬು, ರಾಜ್ಯ ಮುಖಂಡ ಮಹಮದ್ ಸಾದಿಕ್, ಕಾರ್ಮಿಕ ವಿಭಾಗದ ಅರುಣ್ ಕುಮಾರ್, ತಾಲೂಕು ಮುಖಂಡರಾದ ಹರಿಹರ, ಚೇತನ ಇದ್ದರು.










