ಚನ್ನರಾಯಪಟ್ಟಣ: ಸರ್ಕಾರಿ ಶಾಲೆ ಉಳಿವಿಗೆ ಗ್ರಾಮಸ್ಥರು ಮುಂದಾಗಬೇಕು: ಕೆಡಿಪಿ ಸದಸ್ಯ ಯೋಗೇಶ್

KDP member Byadarahalli Yogesh said that villagers should take the lead in saving government schools.

ಚನ್ನರಾಯಪಟ್ಟಣ: ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವಲ್ಲಿ ಗ್ರಾಮಸ್ಥರು ಮುಂದಾಗಬೇಕು ಎಂದು ಕೆಡಿಪಿ ಸದಸ್ಯ ಬ್ಯಾಡರಹಳ್ಳಿ ಯೋಗೇಶ್ ಹೇಳಿದರು.

ತಾಲ್ಲೂಕಿನ ಬ್ಯಾಡರಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿ, ಪಾಲಕರು ಆಂಗ್ಲ ಮಾಧ್ಯಮದ ವ್ಯಾಮೋಹದಿಂದ ಹೊರ ಬಂದಲ್ಲಿ ಮಾತ್ರ ಸರ್ಕಾರಿ ಶಾಲೆಗಳು ಉಳಿಯಲಿವೆ ಎಂದರು.

ಸರ್ಕಾರಿ ಶಾಲೆಗಳು ಉಚಿತ ಶಿಕ್ಷಣ ನೀಡುವ ಮೂಲಕ ಬಡ ಮಕ್ಕಳಿಗೆ ವೇದಿಕೆ ಕಲ್ಪಿಸಿಕೊಡಲಿವೆ. ಸರ್ಕಾರಿ ಶಾಲೆಯಲ್ಲಿ ಓದಿದ ಅದೆಷ್ಟೋ ಮಹನೀಯರು ಕೃಷಿ, ವಿಜ್ಞಾನ, ಶಿಕ್ಷಣ, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವುದು ಶ್ಲಾಘನೀಯ ಸಂಗತಿ ಎಂದು ತಿಳಿಸಿದರು.

ಗ್ರಾಮದ ಶಾಲಾ ಕಟ್ಟಡದ ಗೋಡೆ ಬಿರುಕು ಬಿಟ್ಟಿದ್ದು ಕಿಟಕಿ, ಬಾಗಿಲು ಹಾಗೂ ಮೇಲ್ಚಾವಣಿಯ ಮರ ಮುಟ್ಟುಗಳು ಗೆದ್ದಲು ಹಿಡಿದಿವೆ. ಇಂತಹ ಅಪಾಯದ ಕೆಳಗೆ ಕುಳಿತು ವಿದ್ಯಾರ್ಥಿಗಳು ಶಿಕ್ಷಣ ಪಡೆಯಬೇಕಾದ ಅನಿವಾರ್ಯತೆ ಇದೆ. ಹಿನ್ನೆಲೆಯಲ್ಲಿ ಶಾಲಾ ಕೊಠಡಿ ದುರಸ್ತಿ ಅಗತ್ಯವಿದ್ಜು ಅಗತ್ಯ ಅನುದಾನ ಕಲ್ಪಿಸುವಂತೆ ಕೆಡಿಪಿ ಸಭೆಯಲ್ಲಿ ಮನವಿ ಮಾಡಲಾಗಿದೆ ಎಂದರು.

ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಅನಿಲ್ ಮಾತನಾಡಿ, ಶೈಕ್ಷಣಿಕ ಅಭಿವೃದ್ಧಿ ಸಲುವಾಗಿ ಸರ್ಕಾರವು ಉಚಿತವಾಗಿ ಶಿಕ್ಷಣ ನೀಡುತ್ತಿದೆ. ಸರ್ಕಾರಿ ಶಾಲೆಗಳ ಮಕ್ಕಳಿಗೆ ಯಾವುದೇ ಒಂದು ಸಣ್ಣ ಅವಕಾಶ ಸಿಕ್ಕರೆ ಸಾಕು ಸದ್ಬಳಕೆ ಮಾಡಿಕೊಳ್ಳುವ ಸಾಮರ್ಥ್ಯವಿದೆ ಎಂದರು.

ಆಂಗ್ಲ ಮಾಧ್ಯಮ ಹಾಗೂ ಖಾಸಗಿ ಶಾಲಾ ವ್ಯಾಮೋಹಕ್ಕೆ ಪಾಲಕರು ಜೋತು ಬಿದ್ದಿರುವ ಪರಿಣಾಮ ಸರ್ಕಾರಿ ಶಾಲೆಗಳು ಬೀಗ ಹಾಕುವ ಹಂತ ತಲುಪುತ್ತಿವೆ. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಹಾಗೂ ಸಂಸ್ಕಾರ ಸಿಗಲಿದೆ. ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿ ಸಮಾಜದ ಯಾವುದೇ ಮೂಲೆಯಲ್ಲಿ ಬೇಕಾದರೂ ಬದುಕು ಕಟ್ಟಿಕೊಳ್ಳುತ್ತಾನೆ ಎಂದು ಪಾಲಕರಿಗೆ ಕಿವಿಮಾತು ಹೇಳಿದರು.

ದಿನದಿಂದ ದಿನಕ್ಕೆ ಮಕ್ಕಳ ಹಾಜರಾತಿ ಕಡಿಮೆಯಾಗುತ್ತಿರುವ ಪರಿಣಾಮ ಗ್ರಾಮೀಣ ಭಾಗದ ಸಾಕಷ್ಟು ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚುತ್ತಿವೆ. ಒಮ್ಮೆ ಶಾಲೆ ಬಾಗಿಲು ಮುಚ್ಚಿದರೆ ಮತ್ತೊಮ್ಮೆ ತೆರೆಯಲು ಸಾಧ್ಯವಿಲ್ಲ. ಹೊಸದಾಗಿ ಶಾಲೆ ತೆರೆಯಬೇಕೆಂದರೆ 25 ವಿದ್ಯಾರ್ಥಿಗಳ ಹಾಜರಾತಿ ಬೇಕಾಗಲಿದೆ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಗಂಗಾಧರ್ ಮಾತನಾಡಿ, ಉನ್ನತ ಹುದ್ದೆಗಳನ್ನು ಹರಸಿ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬಾರದು. ಸಮಾಜದಲ್ಲಿ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಶಿಕ್ಷಣವಂತರಾಗಿ ಬೆಳೆಸುವುದು ಪ್ರತಿಯೊಬ್ಬ ಪಾಲಕರ ಆದ್ಯ ಕರ್ತವ್ಯವಾಗಿದೆ ಎಂದು ಸಲಹೆ ನೀಡಿದರು.

ತಂದೆ, ತಾಯಿ ಹಾಗೂ ಪೋಷಕರ ದೈನಂದಿನ ಬದುಕು ಮಕ್ಕಳ ಭವಿಷ್ಯದ ಮೆಟ್ಟಿಲು ಹಾಗೂ ದಾರಿ ದೀಪವಾಗಲಿದೆ. ಮಕ್ಕಳ ಮುಂದೆ ಜಗಳ ಮಾಡುವುದು ಇಲ್ಲವೇ ಅವ್ಯಾಚ ಶಬ್ದಗಳನ್ನು ಬಳಕೆ ಮಾಡಬಾರದು. ಇದರಿಂದ ಮಕ್ಕಳ ಮನಸ್ಸು ಹಾಗೂ ಶೈಕ್ಷಣಿಕ ಜೀವನದ ಮೇಲೆ ಪ್ರಭಾವ ಬೀರುತ್ತದೆ ಎಂದು ಎಚ್ಚರಿಸಿದರು.

ಖಾಸಗಿ ಶಾಲೆಗಳು ಒಳ್ಳೆಯ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ನೀಡುತ್ತಿವೆ ವಿನಃ ಕಡಿಮೆ ಅಂಕ ಗಳಿಸಿದ ಮಕ್ಕಳಿಗೆ ಆದ್ಯತೆ ನೀಡುವುದಿಲ್ಲ. ಹೆತ್ತವರನ್ನು ಸಾಕಲು, ಗುರು ಹಿರಿಯರಿಗೆ ಗೌರವ ನೀಡಲು ಹಾಗೂ ಸಮಾಜದಲ್ಲಿ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಶಿಕ್ಷಣವೇ ಮುಖ್ಯವಲ್ಲ ಸಂಸ್ಕಾರ ಬೇಕು ಎಂದು ಕಿವಿಮಾತು ಹೇಳಿದರು.

ಕ್ಲಸ್ಟರ್ ಮಟ್ಟದ ಅಡಿಗೆ ಸ್ಪರ್ಧೆಯಲ್ಲಿ ವಿವಿಧ ಖಾದ್ಯಗಳನ್ನು ಸಿದ್ಧಪಡಿಸಿ ಪ್ರದರ್ಶನ ನೀಡಲಾಯಿತು. ತೀರ್ಪುಗಾರರು ಶುದ್ಧತೆ ಹಾಗೂ ರುಚಿ ಪರಿಗಣಿಸಿ ಫಲಿತಾಂಶ ನೀಡಿದರು. ಕೊತ್ತನಹಳ್ಳಿ ಶಾಲೆ ಪ್ರಥಮ, ಬ್ಯಾಡರಹಳ್ಳಿ ಶಾಲೆ ದ್ವಿತೀಯ ಹಾಗೂ ಪಿಎಂ ಶ್ರೀ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆ ತೃತೀಯ ಸ್ಥಾನಕ್ಕೆ ಭಾಜನವಾಯಿತು.

ಶಿಕ್ಷಣ ಸಂಯೋಜಕ ಶ್ರೀನಿವಾಸ್, ಸಿಆರ್ ಪಿ ಧರ್ಮಪಾಲ್,
ಎಸ್ಡಿಎಂಸಿ ಅಧ್ಯಕ್ಷ ಸತೀಶ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬೆಟ್ಟೇಗೌಡ, ಸರ್ಕಾರಿ ನೌಕರರ ಸಂಘದ ಜಿಲ್ಲಾ ನಿರ್ದೇಶಕ ಹಿರಿಯಣ್ಣ. ತಾಲ್ಲೂಕು ನಿರ್ದೇಶಕ ಹೆಚ್.ಎನ್.ಮೂರ್ತಿ, ಮುಖ್ಯಶಿಕ್ಷಕಿ ದ್ರಾಕ್ಷಾಹಿಣಿ, ಪಾಲಕರು ಹಾಗೂ ಇತರರಿದ್ದರು.

KDP member Byadarahalli Yogesh said that villagers should take the lead in saving government schools.