‘ಕಾಂತಾರ‘ ಸಿನಿಮಾದ ದೊಡ್ಡ ಯಶಸ್ಸಿನ ನಂತರ ಸಹಜವಾಗಿಯೇ ‘ಕಾಂತಾರ ಚಾಪ್ಟರ್1’ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇತ್ತು. ಇಂಥದ್ದೊಂದು ಜವಾಬ್ದಾರಿಯೊಂದಿಗೆ ಪ್ರಾಜೆಕ್ಟ್ ಕೈಗೆತ್ತಿಕೊಂಡ ಹೊಂಬಾಳೆ ನಿರ್ಮಾಣ ಸಂಸ್ಥೆ ಮತ್ತು ನಟ – ನಿರ್ದೇಶಕ ರಿಷಬ್ ಶೆಟ್ಟಿ ಸೀಕ್ವೆಲ್ ಅನ್ನು ಜನರ ನಿರೀಕ್ಷೆಗೆ ತಕ್ಕಂತೆ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
‘ಕಾಂತಾರ’ಕ್ಕೂ ಮುನ್ನಿನ ಕತೆಯನ್ನು ದೊಡ್ಡ ಕ್ಯಾನ್ವಾಸ್‌ನಲ್ಲಿ ಆಕರ್ಷಕವಾಗಿ ನಿರೂಪಿಸಿದ್ದಾರೆ. ನಿರ್ದೇಶಕ ರಿಷಬ್ ಕನಸಿಗೆ ಹೊಂಬಾಳೆ ನಿರ್ಮಾಣ ಸಂಸ್ಥೆಯವರು ಬೆಂಬಲವಾಗಿ ನಿಂತಿದ್ದರೆ, ತಾಂತ್ರಿಕ ವರ್ಗದವರ ಶ್ರಮ ಎದ್ದು ಕಾಣುತ್ತದೆ.
‘ಕಾಂತಾರ ಚಾಪ್ಟರ್1’ ಚಿತ್ರಕ್ಕೆ ರಿಷಬ್ ಐತಿಹಾಸಿಕ ಕತೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. 168 ನಿಮಿಷಗಳ ಸಿನಿಮಾಗೆ ಈ ಐತಿಹಾಸಿಕ ಹಿನ್ನೆಲೆ ವರವಾಗಿದೆ. ಮೂರು ಜನಾಂಗಗಳ ಕತೆ ಚಿತ್ರದಲ್ಲಿದ್ದು, ಒಂದಕ್ಕೊಂದು ಬೆಸೆದುಕೊಂಡಿರುವ ಈ ಕತೆಗಳು ಚಿತ್ರಕ್ಕೆ ತಾರ್ಕಿಕತೆ ತಂದುಕೊಟ್ಟಿವೆ. ಈ ಸೀಕ್ವೆಲ್‌ನಲ್ಲಿ ಆಕ್ಷನ್ ಸನ್ನಿವೇಶಗಳಿಗೆ ಹೆಚ್ಚು ಸ್ಕೋಪ್ ಇದ್ದು, ಮೊದಲ ಬಾರಿ ರಿಷಬ್ ಇಂಥದ್ದೊಂದು ಭರ್ಜರಿ ಸಾಹಸಮಯ ಪಾತ್ರ ನಿಭಾಯಿಸಿದ್ದಾರೆ. ನಾಯಕಿ ರುಕ್ಮಿಣಿ ವಂಸತ್ ಮತ್ತು ಬಹುಭಾಷಾ ನಟ ಜಯರಾಂ ಅವರ ಪಾತ್ರಗಳಿಗೂ ಚಿತ್ರದಲ್ಲಿ ಸ್ಕೋಪ್ ಇದೆ.
ತುಳುನಾಡಿನ ದೈವಗಳ ಬಗ್ಗೆ ಕರ್ನಾಟಕದ ಇತರೆ ಭಾಗಗಳ ಜನರಿಗೆ ಹೆಚ್ಚು ಗೊತ್ತಿಲ್ಲ. ‘ಕಾಂತಾರ ಚಾಪ್ಟರ್ 1’, ದೈವಗಳ ಸುತ್ತ ನಡೆಯುವ ಕತೆ. ಹಾಗಾಗಿ ಇದು ಪ್ರೇಕ್ಷಕರಿಗೆ ಹೊಸತೇ ಅನಿಸುತ್ತದೆ. ದೊಡ್ಡ ಕ್ಯಾನ್ವಾಸ್‌ನ ಚಿತ್ರದ ನಿರ್ದೇಶನದ ದೊಡ್ಡ ಜವಾಬ್ದಾರಿ ಜೊತೆ ನಟನೆಯನ್ನೂ ಸೊಗಸಾಗಿ ನಿಭಾಯಿಸಿದ್ದಾರೆ ರಿಷಬ್ ಶೆಟ್ಟಿ. ಸಾಹಸ ಸನ್ನಿವೇಶಗಳಿಗಾಗಿ ಅವರು ವಿಶೇಷ ತರಬೇತಿ ಪಡೆದಿರುವುದು ತೆರೆ ಮೇಲೆ ಕಾಣಿಸುತ್ತದೆ. ‘ಕನಕವತಿ’ಯಾಗಿ ನಟಿ ರುಕ್ಮಿಣಿ ವಸಂತ್ ಪಾತ್ರ ಗಮನ ಸೆಳೆಯುತ್ತದೆ. ಅವರ ಪಾತ್ರ ಕತೆಗೆ ಮಹತ್ವದ ತಿರುವು ನೀಡುತ್ತದೆ. ಕನ್ನಡ ಮೂಲದ ಬಾಲಿವುಡ್ ನಟ ಗುಲ್ಶನ್ ದೇವಯ್ಯ ಅವರ ಪಾತ್ರವೂ ಸೊಗಸಾಗಿದೆ.
ಚಿತ್ರ ಆಪ್ತವಾಗುವುದಕ್ಕೆ ಸಂಗೀತ ಸಂಯೋಜಕ ಅಜನೀಶ್ ಲೋಕನಾಥ್ ಅವರ ಕೊಡುಗೆ ಮಹತ್ವದ್ದು. ಗೀತ ಸಂಗೀತಕ್ಕಿಂದ ಹಿನ್ನೆಲೆ ಸಂಗೀತದಲ್ಲಿ ಅವರು ಹೆಚ್ಚು ಸ್ಕೋರ್ ಮಾಡುತ್ತಾರೆ. ಕಲಾನಿರ್ದೇಶಕ, ಸಾಹಸ ಸಂಯೋಜಕರ ಕೆಲಸಕ್ಕೂ ದೊಡ್ಡ ಚಪ್ಪಾಳೆ ಸಲ್ಲಬೇಕು. ಕೆಲವೆಡೆ ಗ್ರಾಫಿಕ್ಸ್ ಬಳಕೆ ಮಾಡಿದ್ದು, ಇಲ್ಲಿ ಇನ್ನೊಂದಿಷ್ಟು ಪರ್ಫೆಕ್ಷನ್ ಅಗತ್ಯವಿತ್ತು ಎನಿಸದಿರದು. ಕೆಲವು ಇತಿಮಿತಿಗಳ ಮಧ್ಯೆ ‘ಕಾಂತಾರ ಚಾಪ್ಟರ್ 1’ ಒಂದೊಳ್ಳೆಯ ಮನರಂಜನೆಯ ಚಿತ್ರವಾಗಿ ರುಚಿಸುತ್ತದೆ.










