ಚನ್ನರಾಯಪಟ್ಟಣ: ವ್ಯವಹಾರಿಕವಾಗಿ ಅನ್ಯ ಭಾಷೆಗಳ ಬಳಕೆ ಇರಲಿ, ಆದರೆ ಮಾತೃಭಾಷೆ ಕನ್ನಡ ಸದಾಕಾಲ ನಾಲಿಗೆಯ ಮೇಲೆ ನಲಿದಾಡಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಎಚ್.ಎನ್.ಲೋಕೇಶ್ ಹೇಳಿದರು.
ತಾಲೂಕಿನ ನುಗ್ಗೇಹಳ್ಳಿ ಗ್ರಾಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕ ಹಾಗೂ ಹೋಬಳಿ ವ್ಯಾಪ್ತಿಯ ಎಲ್ಲಾ ಶಾಲೆಗಳ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ, ಸಾಲುಮರದ ತಿಮ್ಮಕ್ಕ ಅವರಿಗೆ ಸಂತಾಪ ಹಾಗೂ ಡಾ.ಎಸ್.ಎಲ್.ಭೈರಪ್ಪ ಅವರಿಗೆ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ನಡ ಎಂಬುದು ಭಾಷೆಯಷ್ಟೇ ಅಲ್ಲ ನಾಡಿನ ಸಂಸ್ಕೃತಿ. ಸುಲಲಿತ ಹಾಗೂ ಸ್ಪಷ್ಟ ಭಾಷೆಯಾಗಿದ್ದು ಎಲ್ಲಿಂದ ಯಾರೇ ಬಂದರೂ ಸ್ವಾಗತಿಸುವ ನಾಡು ನಮ್ಮದಾಗಿದೆ. ಇಲ್ಲಿ ಇರುವವರೆಗೂ ಇಲ್ಲಿಯ ಸಂಸ್ಕೃತಿಗೆ ಹೊಂದಿಕೊಂಡು ನಾಡು ನುಡಿಗೆ ಗೌರವ ನೀಡಬೇಕು ಎಂದು ತಿಳಿಸಿದರು.
ಹೋಬಳಿ ಘಟಕದ ಅಧ್ಯಕ್ಷ ಬಿ.ಆರ್.ದೊರೆಸ್ವಾಮಿ ಮಾತನಾಡಿ, ಕನ್ನಡ ಒಂದು ಶ್ರೀಮಂತ ಭಾಷೆ, ಪ್ರತಿ ಪದಗಳಲ್ಲಿಯೂ ಸಾಹಿತ್ಯ ಭಾವನೆ ತುಂಬಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಆಂಗ್ಲ ಹಾಗೂ ಇತರೆ ಅನ್ಯ ಭಾಷೆಗಳಿಗೆ ಜೋತುಬಿದ್ದಿರುವ ಕೆಲವರು ಮಾತೃಭಾಷೆಯಲ್ಲಿ ಮಾತನಾಡಲು ಹಿಂಜರಿಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಮಾರಾಟ ಮಹಾಮಂಡಳದ ಅಧ್ಯಕ್ಷ ಸಿ.ಎನ್. ಪುಟ್ಟಸ್ವಾಮಿಗೌಡ ಮಾತನಾಡಿ, ಬೆಂಗಳೂರು, ಮಂಗಳೂರು ಸೇರಿದಂತೆ ವಿವಿಧ ನಗರ ಪ್ರದೇಶಗಳಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ. 8 ಜ್ಞಾನಪೀಠ ಪ್ರಶಸ್ತಿ ಪಡೆದಿರುವ ಹೆಮ್ಮೆಯ ಭಾಷೆ ನಮ್ಮದು. ದೇಶಪ್ರೇಮದ ಜೊತೆಗೆ ಮಾತೃಭಾಷೆಗೂ ಹೆಚ್ಚಿನ ಆದ್ಯತೆ ನೀಡಬೇಕು. ಕನ್ನಡ ಎಂಬುದು ಕೇವಲ ಭಾಷೆಯಷ್ಟೇ ಅಲ್ಲ ಕನ್ನಡಿಗರ ಆತ್ಮ ಗೌರವವಾಗಿದೆ ಎಂದರು.
ಕನ್ನಡ ಭಾಷೆಯನ್ನು ನಾವು ಬೆಳೆಸುವ ಅಗತ್ಯವಿಲ್ಲ. ಈಗಾಗಲೇ ನಮ್ಮ ಹಿರಿಯರು ಕಟ್ಟಿ ಬೆಳೆಸಿದ್ದಾರೆ. ಅದನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಪ್ರಮುಖ ಕರ್ತವ್ಯವಾಗಿದೆ ಎಂದು ಕಿವಿಮಾತು ಹೇಳಿದರು.
ಕರ್ನಾಟಕ ಜಾನಪದ ಪರಿಷತ್ ಅರಸೀಕೆರೆ ತಾಲೂಕು ಅಧ್ಯಕ್ಷ ಜಿ.ಪರಮೇಶ್ ಮಾತನಾಡಿ, ಪದವಿಗಳನ್ನು ಪಡೆಯುವುದೇ ಶಿಕ್ಷಣವಲ್ಲ. ಸಾಹಿತ್ಯ ಜ್ಞಾನ ಹೊಂದಿರುವ ಎಲ್ಲರೂ ವಿದ್ಯಾವಂತರೇ ಆಗಿರುತ್ತಾರೆ. ಮನಸ್ಸಿನಲ್ಲಿ ಉತ್ತಮ ಭಾವನೆಗಳಿದ್ದರೆ ಸಾಕು ಭಾಷೆ ಹಾಗೂ ಸಾಹಿತ್ಯ ಅಭಿಮಾನ ತಾನಾಗಿಯೇ ರೂಪುಗೊಳ್ಳುತ್ತದೆ ಎಂದರು.
ಇತ್ತೀಚಿನ ದಿನಗಳಲ್ಲಿ ನಾವು ಮಕ್ಕಳಿಗೆ ಸಂಸ್ಕಾರ ನೀಡುವ ಬದಲು ಮೊಬೈಲ್ ಗೀಳು ಅಂಟಿಸುತ್ತಿದ್ದೇವೆ. ರಾಮಾಯಣ ಜೀವನದ ಅವಿಭಾಜ್ಯ ಅಂಗವಾಗಿದ್ದು ಒಂದೊಂದು ಪಾತ್ರಗಳು ಮೌಲ್ಯದಾರಿತ ವಿಚಾರಧಾರೆಗಳನ್ನು ಹೊಂದಿರುತ್ತವೆ. ಈ ಬಗ್ಗೆ ತಿಳಿಸುವ ಮೂಲಕ ಮಕ್ಕಳಿಗೆ ನಮ್ಮ ಸಂಸ್ಕೃತಿ ಹಾಗೂ ಸಂಸ್ಕಾರ ಬೆಳೆಸುವಲ್ಲಿ ನಾವು ಮುಂದಾಗಬೇಕು ಎಂದು ಸಲಹೆ ನೀಡಿದರು.
ಸಾಲುಮರದ ತಿಮ್ಮಕ್ಕ ಅವರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷದ ಕಾಲ ಸಂತಾಪ ಸೂಚಿಸಲಾಯಿತು. ಹಿರಿಯ ಸಾಹಿತಿ ಡಾ. ಎಸ್.ಎಲ್.ಭೈರಪ್ಪ ಅವರ ನುಡಿ ನಮನದದ ಜೊತೆಗೆ ಕನ್ನಡಾಂಬೆ ಹಾಗೂ ಹಿರಿಯ ಸಾಹಿತಿಗಳ ಭಾವಚಿತ್ರಗಳಿಗೆ ಪುಷ್ಪಾರ್ಪಣೆ ಮಾಡಿ ಗೌರವಿಸಲಾಯಿತು.
ನಂತರ ವಿವಿಧ ಶಾಲೆಯ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಕತ್ತರಿಘಟ್ಟದ ಶ್ರೀ ಮೆಳೆಯಮ್ಮ ಆಧ್ಯಾತ್ಮಿಕ ಕೇಂದ್ರದ ಚಂದ್ರಶೇಖರ ಗುರೂಜಿ ಮೆರವಣಿಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.
ಬಿ.ಆರ್.ದೊರೆಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮನಾಥ್ ಧ್ವಜಾರೋಹಣ ನೆರವೇರಿಸಿದರು. ಶಾಲಾ ವಿದ್ಯಾರ್ಥಿಗಳು ನಾಡಗೀತೆ ಹಾಗೂ ರೈತ ಗೀತೆ ಹಾಡಿದರು. ಕರುನಾಡು ಗೆಳೆಯರ ಬಳಗದ ವತಿಯಿಂದ ಅನ್ನದಾಸೋಹ ಏರ್ಪಡಿಸಲಾಗಿತ್ತು.
ಟಿಎಪಿಸಿಎಂಎಸ್ ಅಧ್ಯಕ್ಷ ಮೆಡಿಕಲ್ ವೆಂಕಟೇಶ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ನಿಂಬೇಹಳ್ಳಿ ಪುಟ್ಟಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಎನ್.ದೀಪಾ, ಇಸಿಓ ಅನಿಲ್, ನಿವೃತ್ತ ಶಿಕ್ಷಣಾಧಿಕಾರಿ ಎನ್.ಜೆ.ಸೋಮನಾಥ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಗೌರವಾಧ್ಯಕ್ಷ ಬೊಮ್ಮೇಗೌಡ, ಕಸಾಪ ಉಪಾಧ್ಯಕ್ಷರಾದ ಲಕ್ಷ್ಮಣ್, ವಿಕ್ಟರ್, ಹೊನ್ನೇಗೌಡ, ಎಚ್.ಪಿ.ಸಂಪತ್ ಕುಮಾರ್, ಪದಾಧಿಕಾರಿಗಳು, ಹುಬ್ಬಳ್ಳಿ ವ್ಯಾಪ್ತಿಯ ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಇತರರು ಪಾಲ್ಗೊಂಡಿದ್ದರು.










